ಕದನ ವಿರಾಮ ಘೋಷಣೆ ಬೆನ್ನಲ್ಲೇ ಲೆಬನಾನ್ ಮೇಲೆ ಇಸ್ರೇಲ್‌ನಿಂದ ಭೀಕರ ದಾಳಿ! – ಹಾರ್ಮುಜ್ ಜಲಸಂಧಿ ಮತ್ತೆ ಕ್ಲೋಸ್!

ಇರಾನ್ ಮತ್ತು ಅಮೆರಿಕ ಕದನ ವಿರಾಮ ಘೋಷಣೆ ಮಾಡಿದ 24 ಗಂಟೆಯೊಳಗೆ ಮತ್ತೆ ನೆತ್ತರು ಹರಿದಿದೆ. ಇಸ್ರೇಲ್ ವಾಯುಪಡೆ ಲೆಬನಾನ್ ಮೇಲೆ ಕೇವಲ 10 ನಿಮಿಷಗಳಲ್ಲಿ 100 ಕ್ಷಿಪಣಿ ದಾಳಿ ನಡೆಸಿದೆ. ಇದನ್ನು ಈ ಯುದ್ಧದ ಅತ್ಯಂತ ದೊಡ್ಡ ಸಂಘಟಿತ ದಾಳಿ ಎಂದು ಇಸ್ರೇಲ್ ಬಣ್ಣಿಸಿದೆ.
ಇದನ್ನೂ ಓದಿ: ಚಾರ್ ಧಾಮ್ ಯಾತ್ರೆಗೆ ಹೋಗುವವರಿಗೆ ಬಿಗ್ ಶಾಕ್! – ಹೆಲಿಕಾಪ್ಟರ್, ಪೂಜಾ ದರಗಳಲ್ಲಿ ಭಾರಿ ಏರಿಕೆ
ಇಸ್ರೇಲ್ ಬುಧವಾರ ಏಕಾಏಕಿ ದಾಳಿ ನಡೆಸಿದೆ. ರಾಜಧಾನಿ ಬೈರೂತ್ ಮಧ್ಯಭಾಗ, ಬೆಕಾ ವ್ಯಾಲಿ ಮತ್ತು ದಕ್ಷಿಣ ಲೆಬನಾನ್‌ನ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳು ಹಾಗೂ ಶಸ್ತ್ರಾಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 254 ಜನರು ಸಾವನ್ನಪ್ಪಿದ್ದಾರೆ ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಲೆಬನಾನ್ ಮೇಲಿನ ಕಾರ್ಯಾಚರಣೆಗೆ ಈ ಕದನ ವಿರಾಮ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಇನ್ನು ಲೆಬನಾನ್ ಮೇಲೆ ದಾಳಿ ನಡೆದ ಬೆನ್ನಲ್ಲೇ ಇರಾನ್ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಇರಾನ್ ಜಾಗತಿಕ ತೈಲ ಸಾರಿಗೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಮತ್ತೆ ಮುಚ್ಚಿದೆ. ಜಲಸಂಧಿಯನ್ನು ಮುಚ್ಚಿದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಡಗುಗಳು ದಾರಿ ಬದಲಿಸಿ ವಾಪಸ್ ಹೋಗುತ್ತಿವೆ. ತೈಲ ಟ್ಯಾಂಕರ್ ‘AUROURA’ ಮುಸಂದಮ್ ಕರಾವಳಿಯ ಬಳಿ ಇದ್ದಕ್ಕಿದ್ದಂತೆ ಯೂ-ಟರ್ನ್ ಪಡೆದು ಪರ್ಷಿಯನ್ ಗಲ್ಫ್ ಕಡೆಗೆ ಮುಖ ಮಾಡಿದೆ. ಕೇವಲ 7 ಹಡಗುಗಳು ಮಾತ್ರ ಬುಧವಾರ ಈ ಜಲಸಂಧಿಯನ್ನು ದಾಟಲು ಯಶಸ್ವಿಯಾಗಿವೆ ಎಂದು ವರದಿಗಳು ತಿಳಿಸಿವೆ.
ಕದನ ವಿರಾಮದ ಒಪ್ಪಂದದ ವ್ಯಾಪ್ತಿಗೆ ಲೆಬನಾನ್ ಬರುತ್ತದೆಯೇ ಎಂಬುದು ಈಗ ದೊಡ್ಡ ವಿವಾದವಾಗಿದೆ. ಲೆಬನಾನ್ ಮೇಲೆ ದಾಳಿ ಮುಂದುವರಿಸಿದರೆ ಅದು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಭಾವಿಸಿದೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಲೆಬನಾನ್ ಈ ಕದನ ವಿರಾಮದ ಒಪ್ಪಂದದ ಭಾಗವಲ್ಲ ಎಂದು ವಾದಿಸುತ್ತಿದ್ದಾರೆ. ಒಟ್ಟಾರೆಯಾಗಿ, ಶಾಂತಿ ಮರಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿದಿವೆ.

ನೋಡಿರಿ

