ಚಾರ್ ಧಾಮ್ ಯಾತ್ರೆಗೆ ಹೋಗುವವರಿಗೆ ಬಿಗ್ ಶಾಕ್! – ಹೆಲಿಕಾಪ್ಟರ್, ಪೂಜಾ ದರಗಳಲ್ಲಿ ಭಾರಿ ಏರಿಕೆ

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್ ಯಾತ್ರೆ ಕೂಡ ಒಂದಾಗಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. 2026ರ ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಯ ಆರಂಭವಾಗುತ್ತಿದ್ದು, ಇದೀಗ ಯಾತ್ರಿಗಳಿಗೆ ಶಾಕಿಂಗ್ ಸುದ್ದಿಯಿದೆ. . ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಪೂಜಾ ಶುಲ್ಕಗಳನ್ನು ಪರಿಷ್ಕರಿಸಿದೆ ಮತ್ತು ಹೆಲಿಕಾಪ್ಟರ್ ಸೇವೆಗಳಿಗೂ ಹೊಸ ದರಗಳನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಸಣ್ಣ ರೋಗ ಬಂದ್ರೂ ICUಗೆ ಶಿಫ್ಟ್! – ಖಾಸಗಿ ಆಸ್ಪತ್ರೆ ಕರಾಳತೆ ಕಂಡು ಒಂದೇ ದಿನಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದ ವೈದ್ಯೆ!
ಕೇದಾರನಾಥ ಮತ್ತು ಬದರಿನಾಥ ಧಾಮಗಳಿಗೆ ಭೇಟಿ ನೀಡುವ ಭಕ್ತರ ಜೇಬು ಗಟ್ಟಿಮಾಡಿಕೊಳ್ಳಬೇಕಿದೆ. ಯಾಕಂದ್ರೆ ಈ ಬಾರಿ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಪೂಜಾ ಶುಲ್ಕಗಳನ್ನು ಪರಿಷ್ಕರಿಸಿದೆ. ಅಷ್ಟೇ ಹೆಲಿಕಾಪ್ಟರ್ ಸೇವೆಗಳಿಗೂ ಹೊಸ ದರಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಸಾಮಾನ್ಯ ಭಕ್ತರಿಗೆ ಸಮಾಧಾನದ ಸಂಗತಿಯೆಂದರೆ, ದೇವಾಲಯಗಳಲ್ಲಿನ ಸಾಂಪ್ರದಾಯಿಕ ನಿಯಮಿತ ದರ್ಶನವು ಮೊದಲಿನಂತೆಯೇ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಹೆಲಿಕಾಪ್ಟರ್ ಸೇವೆಗಳಿಗಾಗಿ ಈ ವರ್ಷ ಹೊಸ ಟೆಂಡರ್ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದ್ದು, ಒಟ್ಟು ಎಂಟು ನಿರ್ವಾಹಕರು ವಿವಿಧ ಮಾರ್ಗಗಳಲ್ಲಿ ಸೇವೆ ಒದಗಿಸಲಿದ್ದಾರೆ. ಹೊಸ ದರದ ಅನ್ವಯ, ಗುಪ್ತಕಾಶಿಯಿಂದ ಕೇದಾರನಾಥಕ್ಕೆ ಏಕಮುಖ ಪ್ರಯಾಣಕ್ಕೆ 6,077ರೂ., ಫಟಾದಿಂದ 4,840 ಮತ್ತು ಶಿರಸಿಯಿಂದ ರೂ. 3,043 ನಿಗದಿಪಡಿಸಲಾಗಿದೆ. ಈ ಬೆಲೆಗಳಿಗೆ ಜಿಎಸ್ಟಿ ಮತ್ತು ಆನ್ಲೈನ್ ಬುಕಿಂಗ್ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸುವುದರಿಂದ ಒಟ್ಟು ವೆಚ್ಚದಲ್ಲಿ ಏರಿಕೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಟಾ ಮಾರ್ಗದಲ್ಲಿ ಬೆಲೆ ಹೆಚ್ಚಳವು ಗಮನಾರ್ಹವಾಗಿದ್ದರೂ, ಶಿರಸಿ ಮಾರ್ಗದ ಪ್ರಯಾಣಿಕರಿಗೆ ದರವು ತುಲನಾತ್ಮಕವಾಗಿ ಸಮಾಧಾನಕರವಾಗಿದೆ.
ಬದರಿನಾಥ ಧಾಮದ ಪರಿಷ್ಕೃತ ದರ
ಬದರಿನಾಥ ಧಾಮದಲ್ಲಿಯೂ ಸಹ ವಿವಿಧ ಧಾರ್ಮಿಕ ವಿಧಿವಿಧಾನಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಇಲ್ಲಿ ಶ್ರೀಮದ್ ಭಾಗವತ ಕಥಾ ಶ್ರವಣದ ಶುಲ್ಕವನ್ನು 51,000 ರಿಂದ ನೇರವಾಗಿ 1,00,000ರೂ. ಕ್ಕೆ ಏರಿಸಲಾಗಿದೆ. ಹಾಗೆಯೇ ಮಹಾಭಿಷೇಕಕ್ಕೆ 5,500, ವೇದ ಮತ್ತು ಗೀತಾ ಪಠಣಕ್ಕೆ 6,000 ಹಾಗೂ ಅಖಂಡ ಜ್ಯೋತಿಗೆ 5,100 ನಿಗದಿಪಡಿಸಲಾಗಿದೆ. ಕಪೂರ್ ಆರತಿ ಮತ್ತು ಖೀರ್ ಭೋಗ್ನಂತಹ ಸೇವೆಗಳ ದರಗಳನ್ನೂ ಸಹ ಭಕ್ತರ ಅನುಕೂಲಕ್ಕೆ ತಕ್ಕಂತೆ ಪರಿಷ್ಕರಿಸಲಾಗಿದ್ದರೂ, ಒಟ್ಟಾರೆ ಪೂಜಾ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ.
ಕೇದಾರನಾಥದಲ್ಲಿ ಪೂಜಾ ಶುಲ್ಕ ಏರಿಕೆ!
ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆಗಳ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಒಂದು ದಿನದ ಪೂಜಾ ಶುಲ್ಕವನ್ನು 28,600 ರಿಂದ 51,00 ರೂ.ಗೆ ಹೆಚ್ಚಿಸಲಾಗಿದ್ದು, ಇದು ಸುಮಾರು ಶೇ.78 ರಷ್ಟು ಹೆಚ್ಚಳವಾಗಿದೆ. ಉಳಿದಂತೆ ಮಹಾಭಿಷೇಕಕ್ಕೆ 11,500, ರುದ್ರಾಭಿಷೇಕಕ್ಕೆ 7,500 ರೂ. ಮತ್ತು ಅಖಂಡ ಜ್ಯೋತಿ ಬೆಳಗಿಸಲು 5,100 ರೂ. ನಿಗದಿಪಡಿಸಲಾಗಿದೆ. ಭಕ್ತರು ಶಿವ ಸಹಸ್ರನಾಮ ಪಠಣಕ್ಕೆ 2,500 ಮತ್ತು ಬಾಲಾ ಭೋಗ್ ನೈವೇದ್ಯಕ್ಕೆ 1,500 ರೂ. ಪಾವತಿಸಬೇಕಾಗುತ್ತದೆ.
ಈ ವರ್ಷ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಯೋಜಿಸುತ್ತಿರುವ ಭಕ್ತರು, ತಮ್ಮ ಪ್ರಯಾಣದ ಯೋಜನೆಯನ್ನು ಸಿದ್ಧಪಡಿಸುವಾಗ ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ವಿಶೇಷ ಪೂಜೆಗಳನ್ನು ಮಾಡಿಸಲು ಇಚ್ಛಿಸುವವರು ಮತ್ತು ಹೆಲಿಕಾಪ್ಟರ್ ಸೇವೆಯನ್ನು ಬಳಸುವವರು ಹೆಚ್ಚುವರಿ ಜಿಎಸ್ಟಿ ಮತ್ತು ಸೇವಾ ತೆರಿಗೆಗಳನ್ನು ಒಳಗೊಂಡಂತೆ ವೆಚ್ಚವನ್ನು ಅಂದಾಜು ಮಾಡಿಕೊಳ್ಳಬೇಕು. ದರಗಳಲ್ಲಿ ಏರಿಕೆಯಾಗಿದ್ದರೂ, ಯಾತ್ರೆಯ ಪಾವಿತ್ರ್ಯತೆ ಮತ್ತು ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಸುಗಮಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ನೋಡಿರಿ

