ಸೆಕೆ ಇದೆ ಎಂದು ಮನೆ ಹೊರಗೆ ಮಲಗಿದ್ದವರ ಮೇಲೆ ಮಾನಸಿಕ ಅಸ್ವಸ್ಥನಿಂದ ಹಲ್ಲೆ! – 6 ಮಂದಿ ಸ್ಥಿತಿ ಗಂಭೀರ!

ಬೇಸಿಗೆಗಾಲ ಶುರುವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಅನೇಕರು ಸೆಕೆ ಇದೆ ಅಂತ ಮನೆ ಹೊರಗೆ ಮಲಗುತ್ತಾರೆ. ಇದೀಗ ಇಲ್ಲೊಂದು ಕಡೆ ಕೂಡ ಸೆಕೆ ಇದೆ ಎಂದು ಮನೆಯ ಹೊರಗೆ ಮಲಗಿದ್ದವರು ಆಸ್ಪತ್ರೆ ಸೇರುವಂತಾಗಿದೆ. ಮಾನಸಿಕ ಅಸ್ವಸ್ಥನೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಕೂಡಲೇ ದೇಶ ತೊರೆಯಿರಿ.. ಇರಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ತಾಂಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹರ್ಜಪ್ಪ ಲಮಾಣಿ ಹಲ್ಲೆ ನಡೆಸಿದ ವ್ಯಕ್ತಿ. ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಗಾಯಗೊಂಡವರು.
ಏನಿದು ಘಟನೆ?
ವಿಪರೀತ ಸೆಖೆ ಅಂತ ಆರು ಮಂದಿ ಮನೆಯ ಹೊರಗೆ ಮಲಗಿದ್ದರು. ಮಧ್ಯರಾತ್ರಿ 1 ಗಂಟೆಯ ವೇಳೆ ಮನೆ ಮುಂದೆ ಮಲಗಿದ್ದವರ ಮೇಲೆ ದೊಣ್ಣೆಯಿಂದ ಆರೋಪಿ ಹರ್ಜಪ್ಪ ಲಮಾಣಿ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡ ಗಾಯಾಳುಗಳು ಏನಾಯಿತು ಎಂಬುದು ತಿಳಿಯದೇ ಜೋರಾಗಿ ಕೂಗಾಡಿದ್ದಾರೆ. ಇವರ ಕೂಗಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಾಳುಗಳ ತಲೆ, ಕಣ್ಣು ಹಾಗೂ ಮುಖದ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನಸಿಕ ಅಸ್ವಸ್ಥ ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೋಡಿರಿ

