KSCAಯಿಂದ ಚಿನ್ನಸ್ವಾಮಿ ರಿನೋವೇಷನ್ – 20 ಸಾವಿರ ಸೀಟ್ ಹೆಚ್ಚಳಕ್ಕೆ ಪ್ಲ್ಯಾನ್

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮರಳಿ ತಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈಗ ಸ್ಟೇಡಿಯಂ ನವೀಕರಣಕ್ಕೆ ಮುಂದಾಗಿದೆ. ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು 20000ದಷ್ಟು ಹೆಚ್ಚಿಸಲು ಚಿಂತನೆ ನಡೆಸಿರುವ ಕೆಎಸ್ಸಿಎ, ಇದಕ್ಕಾಗಿ ಟೆಂಡರ್ನ ಆರಂಭಿಕ ಪ್ರಕ್ರಿಯೆಯನ್ನೂ ಆರಂಭಿಸಿದೆ.
ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ಅಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವಾಕಾಂಕ್ಷೆಯ ನವೀಕರಣ ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಪ್ರಸ್ತುತ ಸುಮಾರು 34,000 ಇರುವ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 20,000 ಆಸನಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಕೆಎಸ್ಸಿಎ ಮುಂದಿಟ್ಟಿದೆ. ಈ ಕ್ರೀಡಾಂಗಣ 1974ರಲ್ಲಿ ನಿರ್ಮಾಣಗೊಂಡಿದ್ದು, 2024ರಲ್ಲಿ 50 ವರ್ಷ ಪೂರ್ಣಗೊಳಿಸಿತ್ತು.
ಇದನ್ನೂ ಓದಿ: ಸಣ್ಣ ರೋಗ ಬಂದ್ರೂ ICUಗೆ ಶಿಫ್ಟ್! – ಖಾಸಗಿ ಆಸ್ಪತ್ರೆ ಕರಾಳತೆ ಕಂಡು ಒಂದೇ ದಿನಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದ ವೈದ್ಯೆ!
ನವೀಕರಣದ ಮೊದಲ ಹೆಜ್ಜೆ ಎಂಬಂತೆ ಕೆಎಸ್ಸಿಎ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯು ಕ್ರೀಡಾಂಗಣದ ಮರುವಿನ್ಯಾಸ, ಪ್ರೇಕ್ಷಕರ ಸುಧಾರಿತ ಸೌಲಭ್ಯ, ಪಾರ್ಕಿಂಗ್, ಜನದಟ್ಟಣೆ ನಿರ್ವಹಣೆಯನ್ನೂ ಹೊಂದಿದೆ.ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವೆಂಕಟೇಶ್ ಪ್ರಸಾದ್, ‘ನವೀಕರಣ ಕಾರ್ಯ ಪೂರ್ಣಗೊಳಿಸಲು ನಾವು ಯಾವುದೇ ಸಮಯ ನಿಗದಿಪಡಿಸಿಲ್ಲ. ಏಕೆಂದರೆ ಇದು ದೀರ್ಘ ಪ್ರಕ್ರಿಯೆ. ಅನುಮೋದನೆ ಪಡೆಯಲು ನಾವು ಬಿಡ್ ಆಹ್ವಾನಿಸಬೇಕು ಮತ್ತು ಹಲವು ಸುತ್ತಿನ ಸಭೆ ನಡೆಸಬೇಕಿದೆ. ಅದಕ್ಕೆ ತುಂಬಾ ಸಮಯ ಬೇಕು. ಆದರೆ ನನ್ನ ಅಧಿಕಾರಾವಧಿಯಲ್ಲೇ ಕ್ರೀಡಾಂಗಣ ನವೀಕರಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದಿದ್ದಾರೆ.
ಏನೆಲ್ಲಾ ಬದಲಾವಣೆ ಆಗುತ್ತೆ?
- ಕ್ರೀಡಾಂಗಣಕ್ಕೆ ಹೊಸ ವಿನ್ಯಾಸ
2. ಆಸನ ಸಾಮರ್ಥ್ಯ ಹೆಚ್ಚಳ
3. ಪ್ರೇಕ್ಷಕರಿಗೆ ಸುಧಾರಿತ ಸೌಲಭ್ಯ
4. ಜನಸಂದಣಿ ನಿಯಂತ್ರಣ ವ್ಯವಸ್ಥೆ
5. ಉತ್ತಮ ಪಾರ್ಕಿಂಗ್ ಸೌಲಭ್ಯ
6. ಸಂಚಾರ ನಿರ್ವಹಣಾ ವ್ಯವಸ್ಥೆ

ನೋಡಿರಿ

