ಸೆಕೆ ಎಂದು ಬಾಗಿಲು ತೆರೆದಿಟ್ಟು ಮಲಗಿದ ಮಹಿಳೆ! – ಬೆಳಗ್ಗೆ ಏಳುವಾಗ ಮಾಂಗಲ್ಯಸರ, 2 ಫೋನ್‌ ಮಾಯ!

ಸೆಕೆ ಎಂದು ಬಾಗಿಲು ತೆರೆದಿಟ್ಟು ಮಲಗಿದ ಮಹಿಳೆ! – ಬೆಳಗ್ಗೆ ಏಳುವಾಗ ಮಾಂಗಲ್ಯಸರ, 2 ಫೋನ್‌ ಮಾಯ!

ಬೇಸಿಗೆಗಾಲ ಆರಂಭವಾಗಿದೆ. ತಾಪಮಾನ ಹೆಚ್ಚಳದಿಂದಾಗಿ ಮನೆಯಲ್ಲಿ ಕೂರುವುದು ಕೂಡ ಕಷ್ಟ. ಸೆಕೆಯಿಂದಾಗಿ ಜನ ಹೈರಾಣಾಗಿದ್ದಾರೆ. ಇದೀಗ ಇಲ್ಲೊಂದು ಕಡೆ ಸೆಕೆ ಎಂದು ಮಹಿಳೆಯೊಬ್ಬರು ಬಾಗಿಲು ತೆರೆದಿಟ್ಟುಕೊಂಡು ಮಲಗಿದ್ದಾರೆ. ನಿದ್ದೆಯಿಂದ ಎಚ್ಚರವಾಗುತ್ತಿದ್ದಂತೆ ಆಕೆಯ ಮೈಮೇಲಿದ್ದ ಚಿನ್ನ ನಾಪತ್ತೆಯಾಗಿದೆ.

ಇದನ್ನೂ ಓದಿ: ಕೇರಳದಿಂದ ಟ್ರೆಕ್ಕಿಂಗ್‌ಗೆ ಬಂದಿದ್ದ ಬಾಲಕಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆ!

ಈ ಘಟನೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ಈ ಘಟನೆ ನಡೆದಿದೆ. ಅಶೋಕನಗರದ ನಿವಾಸಿ ಶೈಲಜಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಸುಮಾರು 2:30ರ ಸುಮಾರಿಗೆ ಮನೆಯೊಳಗೆ ಗಾಳಿ ಬರಲಿ ಎಂಬ ಕಾರಣಕ್ಕೆ ಮುಖ್ಯ ಬಾಗಿಲನ್ನು ತೆರೆದಿಟ್ಟು ಗಾಢ ನಿದ್ರೆಗೆ ಜಾರಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು ಮನೆಯೊಳಗೆ ನುಗ್ಗಿ, ಅವರ ಪಕ್ಕದಲ್ಲೇ ಇದ್ದ 18 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಕದ್ದಿದ್ದಾನೆ. ಕಳುವಾದ ಒಟ್ಟು ಮೌಲ್ಯ ಸುಮಾರು 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬೆಳಿಗ್ಗೆ 6 ಗಂಟೆಗೆ ಎದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ 2:25ರ ಸುಮಾರಿಗೆ ಬರಿಗಾಲಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಸಾಲು ಸಾಲು ಮನೆಗಳ ಬಾಗಿಲನ್ನು ತಳ್ಳುತ್ತಿರುವುದು ಕಂಡುಬಂದಿದೆ. ಶೈಲಜಾ ಅವರ ಮನೆಯ ಬಾಗಿಲು ತೆರೆದಿದ್ದರಿಂದ ಸುಲಭವಾಗಿ ಒಳನುಗ್ಗಿ ಕೃತ್ಯ ಎಸಗಿದ್ದಾನೆ.

ಘಟನೆ ನಡೆದ ಕೂಡಲೇ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಎಫ್‌ಐಆರ್ ದಾಖಲಿಸಲು ಪೊಲೀಸರು ಒಂದು ದಿನ ಇಡೀ ಕಾಯುವಂತೆ ಮಾಡಿದರು ಎಂದು ಶೈಲಜಾ ಅವರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಲಜಾ ಅವರು ಈ ಹಿಂದೆ ಸ್ಕಿನ್‌ಕೇರ್ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ಆರೋಗ್ಯದ ಕಾರಣದಿಂದ ಕೆಲಸ ಬಿಟ್ಟಿದ್ದರು.

ಇನ್ನು ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ರಾತ್ರಿ ವೇಳೆ ಎಷ್ಟೇ ಸೆಖೆಯಿದ್ದರೂ ಮನೆಯ ಮುಖ್ಯ ಬಾಗಿಲನ್ನು ಲಾಕ್ ಮಾಡುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ಕಿಟಕಿಗಳಿಗೆ ಗಟ್ಟಿಮುಟ್ಟಾದ ಗ್ರಿಲ್ ಅಳವಡಿಸಿ. ಬೆಲೆಬಾಳುವ ಚಿನ್ನಾಭರಣ ಮತ್ತು ಮೊಬೈಲ್‌ಗಳನ್ನು ಮಲಗುವಾಗ ನಿಮ್ಮ ಪಕ್ಕದಲ್ಲಿ ಅಥವಾ ಕಿಟಕಿಯ ಹತ್ತಿರ ಇಡಬೇಡಿ. ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸುರಕ್ಷಿತ ಎಂದು ಸಲಹೆಗಳನ್ನು ನೀಡಿದ್ದಾರೆ.

Shwetha M