ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ತಿಂದು ಭೀಕರ ದುರಂತ – ಇಬ್ಬರು ಮಕ್ಕಳು ಸಾ*ವು, ದಂಪತಿ ಆಸ್ಪತ್ರೆಯಲ್ಲಿ ನರಳಾಟ

ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ತಿಂದು ಭೀಕರ ದುರಂತ – ಇಬ್ಬರು ಮಕ್ಕಳು ಸಾ*ವು, ದಂಪತಿ ಆಸ್ಪತ್ರೆಯಲ್ಲಿ ನರಳಾಟ

ಗುಜರಾತ್‌ ನ ಅಹಮದಾಬಾದ್‌ನ ಚಾಂದ್‌ಖೇಡಾ   ಪ್ರದೇಶದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಮಾರುಕಟ್ಟೆಯಿಂದ ತಂದಿದ್ದ ರೆಡಿಮೇಡ್ ದೋಸೆ ಹಿಟ್ಟಿ  ನಿಂದ ತಯಾರಿಸಿದ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಕಂದಮ್ಮಗಳು ಸಾವನ್ನಪ್ಪಿದ್ದು, ದಂಪತಿಗಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಚಾಂದ್‌ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ಎಂಬ ದಂಪತಿಗಳು ಸ್ಥಳೀಯ ‘ಘನಶ್ಯಾಮ್ ಡೈರಿ’ಯಿಂದ ದೋಸೆ ಹಿಟ್ಟನ್ನು ಖರೀದಿಸಿ ತಂದಿದ್ದರು. ಈ ಹಿಟ್ಟಿನಿಂದ ತಯಾರಿಸಿದ ದೋಸೆಯನ್ನು ಸೇವಿಸಿದ ಇಡೀ ಕುಟುಂಬಕ್ಕೆ ತೀವ್ರವಾಗಿ ವಾಂತಿ-ಭೇದಿಯಾಗಿ ಅದು ‘ಫುಡ್ ಪಾಯ್ಸನ್’  ಆಗಿ ಪರಿಣಮಿಸಿದೆ. ಈ ದುರಂತದಲ್ಲಿ ಮೂರು ತಿಂಗಳ ಹಸುಗೂಸು ರಾಹಾ ಮತ್ತು ನಾಲ್ಕು ವರ್ಷದ ಬಾಲಕಿ ಮಿಶ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿ ಭಾವನಾ ಮತ್ತು ತಂದೆ ವಿಮಲ್ ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಕ್ರಮಕ್ಕೆ ಸಂಬಂಧಕ್ಕೆ ಅಡ್ಡಿಯಾದ ಪ್ರೇಯಸಿ ಗಂಡನ ಕಥೆ ಮುಗಿಸಿದ ಪ್ರಿಯಕರ – ಪ್ಲ್ಯಾನ್ ಮಾಡಿ ಮ*ರ್ಡರ್ ಮಾಡಿದ್ದವನು ಲಾಕ್ ಆಗಿದ್ದೇಗೆ ಗೊತ್ತಾ?

ಸಾಮಾನ್ಯವಾಗಿ ಮೂರು ತಿಂಗಳ ಶಿಶುವಿಗೆ ದೋಸೆಯಂತಹ ಘನ ಆಹಾರವನ್ನು ನೀಡುವುದಿಲ್ಲ. ಹಾಗಿದ್ದರೂ ಆ ಮಗು ಸಾವನ್ನಪ್ಪಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ತಾಯಿ ಭಾವನಾ ಅವರು ದೋಸೆ ಸೇವಿಸಿ ವಿಷಾಹಾರದ ಸಮಸ್ಯೆಗೆ ತುತ್ತಾದ ನಂತರ, ಅದೇ ಸ್ಥಿತಿಯಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸಿರಬಹುದು. ಇದರಿಂದ ವಿಷದ ಅಂಶವು ಹಾಲಿನ ಮೂಲಕ ಮಗುವಿನ ದೇಹ ಸೇರಿ ಪ್ರಾಣಹಾನಿಯಾಗಿರಬಹುದು ಎಂಬ ಸಂಶಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ವಿಮಲ್ ಅವರ ತಂದೆ ಗೌರಿಶಂಕರ್ ಪ್ರಜಾಪತಿ ಅವರು ಘನಶ್ಯಾಮ್ ಡೈರಿಯ ವಿರುದ್ಧ ಗಂಭೀರ ಆರೋಪ ಮಾಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಡೈರಿ ಮಾಲೀಕ ಕೇತನ್ ಪಟೇಲ್, “ನಾವು ದಿನಕ್ಕೆ ನೂರಾರು ಕೆಜಿ ಹಿಟ್ಟು ಮಾರಾಟ ಮಾಡುತ್ತೇವೆ. ಅದೇ ಬ್ಯಾಚ್‌ನ ಹಿಟ್ಟನ್ನು ಅನೇಕ ಗ್ರಾಹಕರು ಬಳಸಿದ್ದಾರೆ, ಯಾರಿಗೂ ತೊಂದರೆಯಾಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆ ಕುಟುಂಬದ ಮೊದಲು ಮತ್ತು ನಂತರ ಹಿಟ್ಟು ತಂದವರು ಸುರಕ್ಷಿತವಾಗಿದ್ದಾರೆ  ಎಂದು ವಾದಿಸಿದ್ದಾರೆ.

 ಈ ಸಾವುಗಳಿಗೆ ನಿಖರ ಕಾರಣ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಕಲಬೆರಕೆಯೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬುದು ಸ್ಪಷ್ಟವಾಗಲಿದೆ.

Kishor KV