ಕೆಡಿ ಸಿನಿಮಾ ಹಾಡಿಗೆ ಇನ್ನೂ ಮುಗಿಯದ ಸಂಕಷ್ಟ! – ನೋರಾ ಫತೇಹಿ, ಸಂಜಯ್ ದತ್​​ಗೆ ಮತ್ತೊಮ್ಮೆ ನೋಟಿಸ್

ಕೆಡಿ ಸಿನಿಮಾ ಹಾಡಿಗೆ ಇನ್ನೂ ಮುಗಿಯದ ಸಂಕಷ್ಟ! – ನೋರಾ ಫತೇಹಿ, ಸಂಜಯ್ ದತ್​​ಗೆ ಮತ್ತೊಮ್ಮೆ ನೋಟಿಸ್

ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾದ ಸರ್ಕೆ ಚುನರ್ ತೇರಿ ಎಂಬ ಹಾಡನ್ನು ಕೇಂದ್ರ ಸರ್ಕಾರ ಈಗಾಗಲೇ ಬ್ಯಾನ್‌ ಮಾಡಿದೆ. ಅಷ್ಟೇ ಅಲ್ಲ ನಿರ್ದೇಶಕ ಪ್ರೇಮ್‌, ನಟಿ ನೋರಾ ಫತೇಹಿ ಸೇರಿದಂತೆ ಹಲವರಿಗೆ ನೋಟಿಸ್‌ ನೀಡಲಾಗಿತ್ತು. ಇಷ್ಟಾದರೂ ಕೂಡಾ ಜೋಗಿ ಪ್ರೇಮ್ ನಿರ್ದೇಶಸಿದ್ದ ಕೆಡಿ ಸಿನಿಮಾದ ಹಾಡಿಗೆ ಇನ್ನೂ ಸಂಕಷ್ಟ ಮಾತ್ರ ತಪ್ಪಿಲ್ಲ. ಇದೀಗ ಮತ್ತೊಮ್ಮೆ ಮಹಿಳಾ ಆಯೋಗ ನೊಟೀಸ್ ನೀಡಿದೆ.

ಇದನ್ನೂ ಓದಿ:ಆ 4 ಗಂಟೆ..  ಧುರಂಧರ್​ 2  ಸಿನಿಮಾ ವೀಕ್ಷಿಸಿ ವಿಮರ್ಶೆ ಬರೆದ ವಿರಾಟ್ ಕೊಹ್ಲಿ! 

ಸರ್ಸೆ ಸೆರಗ ಸರ್ಸೆ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಉಂಟಾದ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಿರ್ದೇಶಕ ಮತ್ತು ಹಾಡಿನ ಮೂಲ ಸಾಹಿತ್ಯ ಬರೆದಿರುವ ಪ್ರೇಮ್, ಹಾಡಿನಲ್ಲಿ ನಟಿಸಿರುವ ನೋರಾ ಫತೇಹಿ, ಸಂಜಯ್ ದತ್ ಹಾಗೂ ಹಾಡಿನ ಹಿಂದಿ ಸಾಹಿತ್ಯ ಬರೆದಿರುವ ರಖೀಬ್ ಆಲಂ ನೊಟೀಸ್ ಜಾರಿ ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಇದೀಗ ಮತ್ತೊಮ್ಮೆ ನೊಟೀಸ್ ನೀಡಿದೆ. ಈ ಹಿಂದೆ ನೀಡಿದ್ದ ನೋಟೀಸಿನ ಅನ್ವಯ ನೋರಾ ಫತೇಹಿ ಏಪ್ರಿಲ್ 6 ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನೋರಾ ಪರವಾಗಿ ಅವರ ವಕೀಲರು ಹಾಜರಾಗಿದ್ದರು, ಇದನ್ನು ಒಪ್ಪದ ಮಹಿಳಾ ಆಯೋಗ ಖುದ್ದಾಗಿ ನಟಿಯೇ ಹಾಜರಾಗೇಕು ಎಂದಿದೆ. ಇದೀಗ ಮತ್ತೊಮ್ಮೆ ನೋರಾ ಫತೇಹಿಗೆ ನೊಟೀಸ್ ಹೊರಡಿಸಿದ್ದು, ಏಪ್ರಿಲ್ 27 ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಅವರಿಗೆ ಏಪ್ರಿಲ್ 8 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಕುರಿತು ಮತ್ತೊಂದು ಸಮನ್ಸ್ ಸಹ ಹೊರಡಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್, ನಿರ್ಮಾಪಕ ಕೆವಿಎನ್ ವೆಂಕಟೇಶ್ ಹಾಗೂ ಹಿಂದಿ ಆವೃತ್ತಿ ಬರೆದಿರುವ ರಖೀಬ್ ಆಲಂ ಅವರಿಗೂ ಸಹ ರಾಷ್ಟ್ರೀಯ ಮಹಿಳಾ ಆಯೋಗ ನೊಟೀಸ್ ನೀಡಿತ್ತು. ಈ ಬಗ್ಗೆ ಲಿಖಿತ ಕ್ಷಮಾಪಣೆ ಸಲ್ಲಿಸಿರುವ ಇವರುಗಳು ಮೂರು ತಿಂಗಳು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿಯೂ ಹೇಳಿದ್ದಾರೆ. ನಿರ್ದೇಶಕ ಪ್ರೇಮ್ ಈ ಬಗ್ಗೆ ವಿಡಿಯೋ ಮೂಲಕವು ಕ್ಷಮೆ ಕೇಳಿದ್ದರು. ತಾವು ಹಾಡನ್ನು ಹಿಂಪಡೆದು ಸಾಹಿತ್ಯವನ್ನು ಮತ್ತೆ ರಚಿಸಿ ಹಾಡನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅಲ್ಲದೆ, ತಾವು ಆ ಹಾಡನ್ನು ಎಣ್ಣೆ ಬಾಟಲಿಗೆ ಹೋಲಿಕೆಯಾಗಿ ಬರೆದಿರುವುದಾಗಿ ಸ್ಪಷ್ಟನೆ ನೀಡಿದ್ದರು. ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಸಹ ಹೇಳಿದ್ದರು.

Shwetha M