ಚಿರತೆಗೆ ನಾಲ್ವರು ಬಲಿ – ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸರ್ಕಾರದ ಆದೇಶ
ಮೈಸೂರು: ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಕೆಲ ಗ್ರಾಮಗಳ ಜನತೆ ಚಿರತೆ ಅನ್ನೋ ಪದ ಕೇಳಿದರೆ ಸಾಕು ಬೆಚ್ಚಿಬೀಳುತ್ತಾರೆ. ಅಷ್ಟರಮಟ್ಟಿಗೆ ಚಿರತೆಯೊಂದು ಜನರ ಜೀವನವನ್ನು ನರಕ ಮಾಡಿದೆ. ಈಗಾಗಲೇ ನರಭಕ್ಷಕ ಚಿರತೆ ನಾಲ್ಕು ಜನರನ್ನು ಬಲಿ ಪಡೆದಿದೆ. ಹೀಗಾಗಿ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸರ್ಕಾರ ಆದೇಶ ಮಾಡಿದೆ. ತಿ. ನರಸೀಪುರದ ಕನ್ನಾಯಕನಹಳ್ಳಿ ಹಾಗೂ ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ ಬಲಿಯಾದ ಸಿದ್ದಮ್ಮ ಹಾಗೂ ಜಯಂತ್ ಅವರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಹಾರ ಧನದ ಚೆಕ್ ವಿತರಣೆ ಮಾಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ , ‘‘ನರಭಕ್ಷಕ ಚಿರತೆಯು ಸೆರೆ ಸಿಗದಿದ್ದರೆ, ಅದನ್ನು ಶೂಟ್ ಮಾಡಲು ಅರಣ್ಯ ಅಧಿಕಾರಿಗಳಿಗೆ ಈಗಾಗಲೇ ಮುಖ್ಯಮಂತ್ರಿಯವರು ಆದೇಶ ನೀಡಿದ್ದಾರೆ’’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಣದ ಆಮಿಷ.. ಕುಕ್ಕರ್ ಕಾಳಗ – ರಾಜ್ಯ ರಾಜಕೀಯದಲ್ಲಿ ಗಿಫ್ಟ್ ಪಾಲಿಟಿಕ್ಸ್..!
ಈಗಾಗಲೇ ತಿ.ನರಸೀಪುರ ತಾಲೂಕಿನಲ್ಲಿ ನಾಲ್ಕು ಜೀವ ಬಲಿ ಪಡೆದಿರುವ ಚಿರತೆಯನ್ನು ಸೆರೆ ಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿದೆ. ತಿ.ನರಸೀಪುರ ತಾಲೂಕಿನಲ್ಲಿ ಕಬ್ಬು ಕಟಾವು ಮಾಡಲು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಶಾಲಾ ಮಕ್ಕಳು ಓಡಾಡುವ ರಸ್ತೆಗಳಲ್ಲಿ ರಂಬೆ ಕೊಂಬೆ ಹಾಗೂ ಪೊದೆ, ಗಿಡಗಂಟಿಗಳನ್ನು ಕಟಾವು ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಇನ್ನು ಕನ್ನಾಯಕನಹಳ್ಳಿ ಸಿದ್ದಮ್ಮ ಕುಟುಂಬಕ್ಕೆ 13 ಲಕ್ಷ ರೂಪಾಯಿ ಚೆಕ್, ಹಾಗೂ ಹೊರಳಹಳ್ಳಿ ಜಯಂತ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಲಾಗಿದೆ.
ಒಂದೆಡೆ ಕಾಡಾನೆಗಳ ಕಾಟ ಮತ್ತೊಂದೆಡೆ ಹುಲಿ ಬಗ್ಗೆ ಹೆದರಿಕೆ. ಹೀಗಿರುವಾಗಲೇ ಈಗ ಚಿರತೆ ಕೂಡಾ ಮನುಷ್ಯರನ್ನು ಬಲಿ ಪಡೆಯುವುದು ನಿಜಕ್ಕೂ ಆತಂಕದ ವಿಚಾರವೇ. ತಾವು ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳಿಂದ ಕಾಪಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ರೈತರಿಗೆ ಈಗ ತಮ್ಮ ಪ್ರಾಣವನ್ನೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ರೀತಿ ನಿರಂತರವಾಗಿ ಕಾಡುಪ್ರಾಣಿಗಳು ಊರುಗಳಲ್ಲಿ ಉಪಟಳ ನೀಡುವುದು ನಿಲ್ಲುವುದು ಯಾವಾಗ ಅನ್ನೋ ಪ್ರಶ್ನೆ ಎದುರಾಗಿದ್ದಂತೂ ಸತ್ಯ.