ರೂಂನಲ್ಲಿ ಗಂಡನ ಶವ ನೋಡಿ ಕಟ್ಟಡದಿಂದ ಹಾರಿದ ಹೆಂಡತಿ – ಕೌಟುಂಬಿಕ ಕಲಹಕ್ಕೆ ದಂಪತಿ ಸೂ*ಸೈಡ್!

ರೂಂನಲ್ಲಿ ಗಂಡನ ಶವ ನೋಡಿ  ಕಟ್ಟಡದಿಂದ ಹಾರಿದ ಹೆಂಡತಿ – ಕೌಟುಂಬಿಕ ಕಲಹಕ್ಕೆ ದಂಪತಿ ಸೂ*ಸೈಡ್!

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ತೆಲಂಗಾಣ ಮೂಲದ ಯುವ ಐಟಿ ದಂಪತಿ ಆತ್ಮಹತ್ಯೆ  ಮಾಡಿಕೊಂಡಿರುವ ದುರ್ಘಟನೆ  ನಡೆದಿದೆ.  ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪತಿಯ ಆತ್ಮಹತ್ಯೆ ನಂತರ ಪತ್ನಿ ಸಹ 17ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ.

ತೆಲಂಗಾಣದ ಸಿದ್ದಿಪೇಟ ಮೂಲದ 32 ವರ್ಷದ ಭಾನು ಚಂದರ್ ರೆಡ್ಡಿ ಕುಂಟಾ ತಮ್ಮ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಬಿಬಿ ಶಾಜಿಯಾ ಸಿರಾಜ್ (31) ಪತಿಯ ಶವವನ್ನು ಕಂಡು ಆಘಾತಕ್ಕೊಳಗಾಗಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿ ಖಾಸಗಿ ಕಂಪನಿಗಳಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು. ದಂಪತಿಯ ನಡುವೆ ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಇತ್ತೀಚೆಗೆ ಕೂಡ ಇಬ್ಬರ ನಡುವೆ ಜಗಳ ನಡೆದಿದ್ದು, ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: BBK ಬ್ಯೂಟಿಗೆ ಸಿರಾಜ್‌ ಬೋಲ್ಡ್‌.. ಮಹಿರಾ ಜೊತೆ ಕದ್ದುಮುಚ್ಚಿ ಡೇಟಿಂಗ್! – DSP ಮದ್ವೆಗೆ ಮುಹೂರ್ತ ಫಿಕ್ಸ್?‌  

ಸೋಮವಾರ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಭಾನು ಚಂದ್ರ ರೆಡ್ಡಿ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ನಂತರ ಮನೆಗೆ ಬಂದ ಶಾಜಿಯಾ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ್ದು, ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಕಾರಣ ಭದ್ರತಾ ಸಿಬ್ಬಂದಿ ಹಾಗೂ ನೆರೆಹೊರೆಯವರ ಸಹಾಯ ಕೇಳಿದ್ದಾರೆ. ಬಾಗಿಲು ಬಲವಂತವಾಗಿ ತೆರೆಯುತ್ತಿದ್ದಂತೆ ಭಾನು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ದೃಶ್ಯದಿಂದ ಬೆಚ್ಚಿಬಿದ್ದ ಶಾಜಿಯಾ ಕೆಲವೇ ನಿಮಿಷಗಳಲ್ಲಿ ಅದೇ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಟುಂಬದವರ ದೂರಿನ ಆಧಾರದ ಮೇಲೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಲಾಗಿದೆ. ದಂಪತಿಯ ಸಾವಿಗೆ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿಯ ಸಾವಿಗೆ ನಿಖರ ಕಾರಣ ಏನು ಎಂಬುದು ಪೋಸ್ಟ್‌ಮಾರ್ಟಂ ವರದಿ ಬಳಿಕ ತಿಳಿಯಲಿದೆ.

Kishor KV