ಮುತ್ತು ಬಾಳಲ್ಲಿ ಮಹಿಮಾ ಆಗಮನ – ಮಿಸ್ ಉತ್ತರ ಕನ್ನಡ ದೃಷ್ಟಿ ನಾಯಕ್ ಈಗ ಗಂಧದ ಗುಡಿಗೆ ನಾಯಕಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ಗಂಧದ ಗುಡಿ ಧಾರಾವಾಹಿಯಲ್ಲಿ ಮುತ್ತು ಜೋಡಿಗಾಗಿ ಹುಡುಕಾಟ ನಡೆಸುವುದು ವೀಕ್ಷಕರಿಗೂ ಬೋರ್ ಹೊಡೆಸುತ್ತಿತ್ತು. ಮೊದಲು ಮದುವೆ ಮಾತುಕತೆಯಾಗುವುದೇ ಮುತ್ತುಗಾಗಿ. ಆದರೆ, ಆ ಮದುವೆ ನಿಲ್ಲುತ್ತದೆ. ನಂತರ ಮುತ್ತು ತಮ್ಮನ ಮದುವೆ ನಡೆಯುತ್ತದೆ. ನಂತರ ಮತ್ತೊಬ್ಬ ಹುಡುಗಿ ಮುತ್ತು ಬಾಳಲ್ಲಿ ಬರುತ್ತಾಳೆ. ಆ ಮದುವೆಯೂ ನಿಲ್ಲುತ್ತದೆ. ಕೊನೆಗೂ ಈಗ ಮುತ್ತುಗೆ ಮತ್ತೊಂದು ಜೋಡಿ ಸಿಕ್ಕಿದೆ.
ಇದನ್ನೂ ಓದಿ:ಕುಂದಾಪುರದ ಕೆರಾಡಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣ – ಭವ್ಯ ಸೆಟ್ ನಿರ್ಮಿಸಿದ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ
ಶ್ರೀ ಗಂಧದ ಗುಡಿ ಧಾರಾವಾಹಿಯ ಎರಡನೇ ನಾಯಕಿಯಾಗಿ ಹೊಸ ನಟಿ ಎಂಟ್ರಿಕೊಟ್ಟಿದ್ದಾರೆ. ಈಕೆಯೇ ಮುತ್ತು ಬಾಳಿನ ಸಂಗಾತಿಯಾಗಿ ಬರಲಿದ್ದಾಳೆ ಅನ್ನೋದರ ಬಗ್ಗೆ ಸೀರಿಯಲ್ ತಂಡ ಹಿಂಟ್ ಕೊಟ್ಟಿದೆ. ಈಕೆ ಮಿಸ್ ಉತ್ತರ ಕನ್ನಡ 2026 ಕಿರೀಟ ಧರಿಸಿದ ಸುಂದರಿ ಕೂಡ ಹೌದು. ನಾಲ್ಕು ಜನ ಅಣ್ಣ ತಮ್ಮಂದಿರ ಕಥೆಯನ್ನು ಹೊಂದಿರುವ ಧಾರಾವಾಹಿ ಶ್ರೀಗಂಧದ ಗುಡಿ. ಈ ಧಾರಾವಾಹಿಯಲ್ಲಿ ಮುತ್ತು ಮತ್ತು ಭಾರತಿ ಮದುವೆ ಆಗುತ್ತೆ ಎಂದೇ ಎಲ್ಲರೂ ತಿಳಿದಿದ್ದರು, ಆದರೆ ಅದು ಆಗಲಿಲ್ಲ. ಇದೀಗ ಮುತ್ತುರಾಜ್ ಬಾಳಲ್ಲಿ ಮಹಿಮಾ ಎಂಬ ಸುಂದರಿಯ ಆಗಮನವಾಗಿದೆ. ಈಗಾಗಲೇ ಮುತ್ತು ಜೊತೆ ಒಂದು ರೊಮ್ಯಾಂಟಿಕ್ ಸನ್ನಿವೇಶ ಪ್ರೇಕ್ಷಕರ ಎದುರು ಬಂದಾಗಿದೆ.
ಅಣ್ಣನ ಜೊತೆ ಕೆಲಸಕ್ಕಾಗಿ ಊರಿಗೆ ಬಂದ ಉತ್ತರ ಭಾರತದ, ಕನ್ನಡ ಬಾರದ ಹಿಂದಿ ಹುಡುಗಿ ಮಹಿಮಾ ಆಗಿ ದೃಷ್ಟಿ ನಾಯಕ್ ನಟಿಸುತ್ತಿದ್ದಾರೆ. ಈಕೆ ಮುತ್ತು ತೋಳಲ್ಲಿ ಬಂಧಿಯಾಗುವ ಸನ್ನಿವೇಶವನ್ನು ತೋರಿಸಲಾಗಿದೆ. ದೃಷ್ಟಿ ನಾಯಕ್ ಮೇಲೆ ಮುತ್ತು ದೃಷ್ಟಿ ಬಿದ್ದಾಗಿದೆ. ಅಂದಹಾಗೆ ದೃಷ್ಟಿ ನಾಯಕ್‌ಗೆ ಇದು ಮೊದಲ ಸೀರಿಯಲ್. ಆದರೆ ಈಗಾಗಲೇ ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ ಈ ಸುಂದರಿ. ಈಗಾಗಲೇ ಮಿಸ್ ಶಿರಸಿ 2025 ರನ್ನರ್ ಅಪ್ ಹಾಗೂ ಮಿಸ್ ಉತ್ತರ ಕನ್ನಡ 2026 ಕಿರೀಟವನ್ನ ಈಕೆ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಸಿನಿಮಾದಲ್ಲಿ ದೃಷ್ಟಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ದೇವಸಸ್ಯ ಎನ್ನುವ ಸಿನಿಮಾದಲ್ಲಿ, ನೆನಪಿರಲಿ ಪ್ರೇಮ್ ಅಭಿನಯದ ಸ್ಪಾರ್ಕ್ ಸಿನಿಮಾದಲ್ಲಿ ನಟಿ ಭಾವನಾ ಅವರ ಬಾಲ್ಯದ ಪಾತ್ರವನ್ನು ದೃಷ್ಟಿ ನಟಿಸಿದ್ದರು. ತಮ್ಮ ಹೊಸ ಪಾತ್ರದ ಬಗ್ಗೆ ಸಂಭ್ರಮ ಹಂಚಿಕೊಂಡಿರುವ ದೃಷ್ಟಿ, ಸೋಶಿಯಲ್ ಮೀಡಿಯಾದಲ್ಲಿ ‘ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಹೃದಯಪೂರ್ವಕವಾಗಿ ತುಂಬಾ ಕೃತಜ್ಞಳಾಗಿದ್ದೇನೆ. ನನ್ನ ಈ ಪ್ರಯಾಣದಲ್ಲಿ ನೀವು ನೀಡಿದ ಪ್ರೋತ್ಸಾಹ ನನಗೆ ಬಹಳ ಮಹತ್ವದ್ದಾಗಿದೆ. ಶ್ರೀ ಗಂಧದಗುಡಿಯ ಮಹಿಮಾ ಪಾತ್ರಕ್ಕೂ ಇದೇ ರೀತಿಯ ಪ್ರೀತಿ ಮತ್ತು ಬೆಂಬಲ ಸಿಗಲಿ ಎಂದು ಆಶಿಸುತ್ತೇನೆ. ಇಂದು ನನ್ನ ಮೇಲೆ ನನಗೆ ತುಂಬಾ ಹೆಮ್ಮೆ ಇದೆ. ಈ ಧಾರಾಬಾಹಿಯನ್ನು ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 8:30ಕ್ಕೆ ವೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.

ನೋಡಿರಿ

