ಸೀಮೆಎಣ್ಣೆ ವಿತರಿಸಲು ಕೇಂದ್ರ ಸರ್ಕಾರ ಅನುಮತಿ – ಎಲ್ಲಿ? ಹೇಗೆ ಸಿಗುತ್ತೆ ಗೊತ್ತಾ?

ಯುದ್ಧದ ಹಿನ್ನೆಲೆ ಭಾರತದಾದ್ಯಂತ ಆಯ್ದ ಪೆಟ್ರೋಲ್ ಬಂಕ್‌ಗಳ ಮೂಲಕ ಸೀಮೆಎಣ್ಣೆ ವಿತರಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಮಾರ್ಚ್ 29 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೊರಡಿಸಿದ ಅಧಿಕೃತ ಅಧಿಸೂಚನೆಯಂತೆ, ಈಗಾಗಲೇ ‘ಸೀಮೆಎಣ್ಣೆ ಮುಕ್ತ’ ಎಂದು ಘೋಷಿಸಲಾಗಿದ್ದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸೀಮೆಎಣ್ಣೆಯನ್ನು ತಾತ್ಕಾಲಿಕವಾಗಿ ಹಂಚಿಕೆ ಮಾಡಲು ಅನುಮತಿಸಲಾಗಿದೆ.
ಈ ಮಹತ್ವದ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ. ಅಗತ್ಯವಿರುವ ಕುಟುಂಬಗಳಿಗೆ ಅಡುಗೆ ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಶೇಖರಣೆ ಮತ್ತು ಪರವಾನಗಿ ನಿಯಮಗಳಲ್ಲಿ ಸರ್ಕಾರವು ವಿಶೇಷ ಸಡಿಲಿಕೆ ಮಾಡಿದೆ.
ಇದನ್ನೂ ಓದಿ: ಜಡ್ಡು ಚೇಟಾ ಮುಖಾಮುಖಿ ಹೇಗಿರಲಿದೆ? – ರವೀಂದ್ರ ಜಡೇಜಾ ವಿರುದ್ಧ ಸಂಜು ಸಮರ ನೋಡಲು ಫ್ಯಾನ್ಸ್ ಕುತೂಹಲ
ಪ್ರತಿ ಜಿಲ್ಲೆಯಲ್ಲಿ ಗರಿಷ್ಠ ಎರಡು ಪೆಟ್ರೋಲ್ ಬಂಕ್‌ಗಳನ್ನು ಸೀಮೆಎಣ್ಣೆ ಮಾರಾಟಕ್ಕಾಗಿ ಗುರುತಿಸಬಹುದು.ಇಂತಹ ಪ್ರತಿಯೊಂದು ಮಾರಾಟ ಮಳಿಗೆಯು 5,000 ಲೀಟರ್‌ವರೆಗೆ ಸೀಮೆಎಣ್ಣೆಯನ್ನು ಸಂಗ್ರಹಿಸಲು ಅವಕಾಶವಿದೆ.ಸಾರ್ವಜನಿಕ ವಲಯದ ತೈಲ ಕಂಪನಿಗಳ (PSU) ನೇರ ನಿಯಂತ್ರಣದಲ್ಲಿರುವ ಬಂಕ್‌ಗಳಿಗೆ ವಿತರಣೆಯಲ್ಲಿ ಆದ್ಯತೆ ನೀಡಲಾಗುವುದು. ಸಾರಿಗೆ ಮತ್ತು ವಿತರಣೆಯನ್ನು ವೇಗಗೊಳಿಸಲು ಡೀಲರ್ ಮತ್ತು ಟ್ಯಾಂಕ್ ವಾಹನಗಳ ಪರವಾನಗಿ ನಿಯಮಗಳನ್ನು ಸಡಿಲಿಸಲಾಗಿದೆ.
ಕಳೆದ ದಶಕದಲ್ಲಿ ಎಲ್‌ಪಿಜಿ ಬಳಕೆಯ ಹೆಚ್ಚಳದಿಂದಾಗಿ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಆದರೆ ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದೆ. ಎಲ್‌ಪಿಜಿ ಪೂರೈಕೆ ಅಥವಾ ಬೆಲೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶದ ಜನರಿಗೆ ತೊಂದರೆಯಾಗದಂತೆ ಪರ್ಯಾಯ ಇಂಧನ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಸೀಮೆಎಣ್ಣೆಯನ್ನು ಕೇವಲ ಅಡುಗೆ ಮತ್ತು ಬೆಳಕಿನ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಎಂದು ಸರ್ಕಾರವು ಸ್ಪಷ್ಟಪಡಿಸಿದೆ. ಸುರಕ್ಷತಾ ಮಾನದಂಡಗಳನ್ನು ಮತ್ತು ಪೆಸೊ (PESO) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನೋಡಿರಿ

