IPL ಆರಂಭಕ್ಕೂ ಮುನ್ನ 10 ತಂಡಗಳ ನಾಯಕರೊಂದಿಗೆ ಸಭೆ – ರೂಲ್ಸ್ ಕೇಳಿ ಕ್ಯಾಪ್ಟನ್ಗಳು ಆಕ್ರೋಶಗೊಂಡಿದ್ದೇಕೆ ಗೊತ್ತಾ?

ನಾಳೆಯಿಂದ ಐಪಿಎಲ್ ಪ್ರಾರಂಭ ಆಗಲಿದೆ. ಆದರೆ ಅದಕ್ಕೂ ಮೊದಲು, ಪ್ರತಿ ಬಾರಿಯ ಐಪಿಎಲ್ನಂತೆ ಈ ಬಾರಿಯೂ ಬಿಸಿಸಿಐ , ಲೀಗ್ ಆರಂಭಕ್ಕೂ ಮುನ್ನ ಎಲ್ಲಾ 10 ತಂಡಗಳ ನಾಯಕರೊಂದಿಗೆ ಸಭೆ ನಡೆಸಿತು. ಈ ಸಭೆಯಲ್ಲಿ, ಐಪಿಎಲ್ನ ಕೆಲವು ನಿಯಮಗಳ ಕುರಿತು ಚರ್ಚೆ ನಡೆಸಲಾಗಿದ್ದು, ಕೆಲವು ನಾಯಕರು ಐಪಿಎಲ್ನ ಒಂದು ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಐಪಿಎಲ್ನ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು, ಈ ನಿಯಮವನ್ನು ತೆಗೆಯಬೇಕು ಎಂಬ ಮನವಿಯನ್ನು ಮಾಡಿದ್ದಾರೆ. ಆದರೆ ನಾಯಕರ ಮನವಿಯ ಹೊರತಾಗಿಯೂ ಬಿಸಿಸಿಐ ಈ ನಿಯಮವನ್ನು 2027 ರವರೆಗೆ ಮುಂದುವರೆಸುವುದಾಗಿ ತಿಳಿಸಿದೆ.
ಮುಂಬೈನಲ್ಲಿ ನಡೆದ 10 ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಐಪಿಎಲ್ ಮೂಲವೊಂದು ತಿಳಿಸಿದೆ. ಆದಾಗ್ಯೂ ಈ ನಿಯಮವನ್ನು 2027 ರ ನಂತರ ಮಾತ್ರ ಪರಿಶೀಲಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ ಎಂದು ವರದಿಯಾಗಿದೆ. ಅಂದರೆ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದಿನ ಸೀಸನ್ನಲ್ಲೂ ಮುಂದುವರೆಯುವುದು ಖಚಿತವಾಗಿದೆ.
ಇದನ್ನೂ ಓದಿ: 2026ರ IPL ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ – ಆರ್ಸಿಬಿ ಪಂದ್ಯ ಯಾವಾಗ ಗೊತ್ತಾ?
ಐಪಿಎಲ್ ನಾಯಕರ ಸಭೆಯಲ್ಲಿ, ನಾಯಕರೊಬ್ಬರು ಮೊದಲ ಇನ್ನಿಂಗ್ಸ್ನಲ್ಲಿ 10 ಓವರ್ಗಳ ನಂತರವೂ ಚೆಂಡನ್ನು ಬದಲಾಯಿಸುವ ಬೇಡಿಕೆಯನ್ನಿಟ್ಟರು. ಆದರೆ ಅದಕ್ಕೆ ಉಳಿದ ನಾಯಕರಿಂದ ಬೆಂಬಲ ಸಿಗಲಿಲ್ಲ. ಸಾಮಾನ್ಯವಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಇಬ್ಬನಿಯ ಪ್ರಭಾವ ಹೆಚ್ಚಾಗುವ ಕಾರಣದಿಂದಾಗಿ ಈ ನಿಯಮವನ್ನು ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಸಹಾಯಕವಾಗುವಂತೆ ಜಾರಿಗೆ ತರಲಾಗಿದೆ. ಇದರ ಜೊತೆಗೆ ತಂಡಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಐಪಿಎಲ್ ಅಧಿಕಾರಿಗಳು ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಹೊಸ ಬಿಸಿಸಿಐ ನಿಯಮಗಳ ಪ್ರಕಾರ, ಪಂದ್ಯದ ದಿನದಂದು ಯಾವ ತಂಡವೂ ಮೈದಾನದಲ್ಲಿ ಅಭ್ಯಾಸ ನಡೆಸುವಂತಿಲ್ಲ. ಹಾಗೆಯೇ ಒಂದು ತಂಡ ಅಭ್ಯಾಸ ಮಾಡಿದ ವಿಕೆಟ್ನಲ್ಲಿ ಇನ್ನೊಂದು ತಂಡ ಅಭ್ಯಾಸ ಮಾಡುವಂತಿಲ್ಲ ಎಂಬುದನ್ನು ಸೂಚಿಸಲಾಗಿದೆ.

ನೋಡಿರಿ

