PAN ಕಾರ್ಡ್​​ಗೆ ಅಪ್ಲೈ ಮಾಡಲು ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್​! – ಏನೆಲ್ಲಾ ನಿಯಮ ಬದಲಾವಣೆಯಾಗಿದೆ?

PAN ಕಾರ್ಡ್​​ಗೆ ಅಪ್ಲೈ ಮಾಡಲು ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್​! – ಏನೆಲ್ಲಾ ನಿಯಮ ಬದಲಾವಣೆಯಾಗಿದೆ?

ಪಾನ್ ಕಾರ್ಡ್ ನಮ್ಮ ಜೀವನದಲ್ಲಿ ಬಹಳ ಪ್ರಮುಖ ದಾಖಲೆ. ಬ್ಯಾಂಕ್ ಖಾತೆ ತೆರೆಯಲು, ಆದಾಯ ತೆರಿಗೆ ಸಲ್ಲಿಸಲು ಮತ್ತು ಹಲವಾರು ಹಣಕಾಸಿನ ಕೆಲಸಗಳಿಗೆ ಇದು ಅಗತ್ಯ. ಇದೀಗ ಪಾನ್‌ ಕಾರ್ಡ್‌ ಪಡೆಯುವ ಬಗ್ಗೆ ಕೇಂದ್ರ ಸರ್ಕಾರ ಹೊಸ ರೂಲ್ಸ್‌ ತಂದಿದೆ. ಹೊಸ ನಿಯಮ ಏ.1ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: ಭಾರತಕ್ಕೆ ತಲೆ ಬಾಗಿದ ಬಾಂಗ್ಲಾ – IPL ಪ್ರಸಾರ ಬ್ಯಾನ್ ಯು ಟರ್ನ್

ಕೇಂದ್ರ ಸರ್ಕಾರವು ಪಾನ್ ಕಾರ್ಡ್ ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದ್ದು, ಏಪ್ರಿಲ್ 1, 2026 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದುವರೆಗೆ ಆಧಾರ್ ಕಾರ್ಡ್ ಮಾತ್ರ ಇದ್ದರೆ ಸುಲಭವಾಗಿ ಪಾನ್ ಕಾರ್ಡ್ ಪಡೆಯಬಹುದಿತ್ತು. ಆದರೆ ಇನ್ಮುಂದೆ ಅದು ಸಾಧ್ಯವಾಗುವುದಿಲ್ಲ.

ಕೇಂದ್ರ ಸರ್ಕಾರದ ಹೊಸ ರೂಲ್ಸ್‌ನಲ್ಲಿ ಏನಿದೆ?

ಭಾರತ ಸರ್ಕಾರದ ಅಂಗಸಂಸ್ಥೆಯಾಗಿರುವ ಕಾಮನ್ ಸರ್ವೀಸಸ್ ಸೆಂಟರ್ (CSC) ನೀಡಿರುವ ಪ್ರಕಟಣೆಯ ಪ್ರಕಾರ, ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರು ಅಥವಾ ಈಗಿರುವ ಪ್ಯಾನ್ ಕಾರ್ಡ್ ಅನ್ನು ನವೀಕರಿಸುವವರು ಇನ್ಮುಂದೆ ಆಧಾರ್ ಕಾರ್ಡ್ ಜೊತೆಗೆ ಹೆಚ್ಚುವರಿ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ. ಈ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸದಿದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಬೇಕಾಗುವ ಹೆಚ್ಚುವರಿ ದಾಖಲೆಗಳು

ಮಾರ್ಚ್ 31, 2026 ರವರೆಗೆ ಹಳೆಯ ನಿಯಮದಂತೆ ಆಧಾರ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಏಪ್ರಿಲ್ 1 ರಿಂದ ಈ ಕೆಳಗಿನ ಯಾವುದಾದರೂ ಒಂದು ದಾಖಲೆಯನ್ನು ಆಧಾರ್ ಜೊತೆಗೆ ಲಗತ್ತಿಸಬೇಕು:

  • ಜನನ ಪ್ರಮಾಣಪತ್ರ
  • ಮತದಾರರ ಗುರುತಿನ ಚೀಟಿ
  • 10ನೇ ತರಗತಿಯ ಅಂಕಪಟ್ಟಿ ಅಥವಾ ಪ್ರಮಾಣಪತ್ರ
  • ಪಾಸ್‌ಪೋರ್ಟ್
  • ಚಾಲನಾ ಪರವಾನಿಗೆ
  • ಮ್ಯಾಜಿಸ್ಟ್ರೇಟ್ ಅವರಿಂದ ದೃಢೀಕರಿಸಲ್ಪಟ್ಟ ಅಫಿಡವಿಟ್.

ಹೆಸರಿನ ಹೊಂದಾಣಿಕೆ ಕಡ್ಡಾಯ

ಹೊಸ ನಿಯಮದ ಪ್ರಕಾರ, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಪ್ಯಾನ್ ಕಾರ್ಡ್ ಅರ್ಜಿಯಲ್ಲಿರುವ ಹೆಸರು ಸಂಪೂರ್ಣವಾಗಿ ಹೊಂದಿಕೆಯಾಗಬೇಕು. ಒಂದು ವೇಳೆ ಹೆಸರಿನಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಪ್ಯಾನ್ ಕಾರ್ಡ್ ಮೇಲೆ ಆಧಾರ್‌ನಲ್ಲಿರುವ ಹೆಸರನ್ನೇ ಮುದ್ರಿಸಲಾಗುತ್ತದೆ. ಆದ್ದರಿಂದ, ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ವಿವರಗಳು ಸರಿಯಾಗಿವೆಯೇ ಎಂಬುದನ್ನು ಅರ್ಜಿದಾರರು ಖಚಿತಪಡಿಸಿಕೊಳ್ಳಬೇಕೆಂದು CSC ಮನವಿ ಮಾಡಿದೆ.

ಹಳೆಯ ಅರ್ಜಿ ನಮೂನೆ ಅಮಾನ್ಯ

ಏಪ್ರಿಲ್ 1, 2026 ರಿಂದ ಹಳೆಯ ಮಾದರಿಯ ಅರ್ಜಿ ನಮೂನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಸರ್ಕಾರ ಬಿಡುಗಡೆ ಮಾಡುವ ಹೊಸ ಮಾದರಿಯ ಅರ್ಜಿಯನ್ನೇ ಬಳಸಬೇಕಾಗುತ್ತದೆ. ಇದರೊಂದಿಗೆ ಸ್ಥಿರಾಸ್ಥಿ ಮತ್ತು ವಾಹನ ಖರೀದಿ ವಹಿವಾಟುಗಳ ನಿಯಮಗಳಲ್ಲೂ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ನಾಗರಿಕರು ಈ ಬದಲಾವಣೆಗಳಿಗೆ ಸಜ್ಜಾಗಬೇಕಿದೆ.

Shwetha M