ಅಮೆರಿಕ – ಇರಾನ್‌ ನಡುವಿನ ಯುದ್ಧಕ್ಕೆ ಬಿಗ್‌ ಟ್ವಿಸ್ಟ್!‌ – ಶಾಂತಿ ಸ್ಥಾಪನೆಗೆ ಪಾಕ್ ಮಧ್ಯಸ್ಥಿಕೆ?

ಅಮೆರಿಕ – ಇರಾನ್‌ ನಡುವಿನ ಯುದ್ಧಕ್ಕೆ ಬಿಗ್‌ ಟ್ವಿಸ್ಟ್!‌ – ಶಾಂತಿ ಸ್ಥಾಪನೆಗೆ ಪಾಕ್ ಮಧ್ಯಸ್ಥಿಕೆ?

ಕಳೆದ 24 ದಿನಗಳಿಂದ ನಡೆಯುತ್ತಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಸದ್ಯಕ್ಕೆ ಶಮನಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ದಿಢೀರ್ ಎನ್ನುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದರು. ಇರಾನ್ ಇಂಧನ ಮತ್ತು ವಿದ್ಯುತ್‌ ಸ್ಥಾವರಗಳ ಮೇಲೆ ನಡೆಸಲು ಯೋಜಿಸಿದ್ದ ಮಿಲಿಟರಿ ದಾಳಿಯನ್ನು ಐದು ದಿನಗಳ ಕಾಲ ಮುಂದೂಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಇವೆಲ್ಲದ್ರ ನಡುವೆ ಅಚ್ಚರಿಯ ಘಟನೆಯೊಂದು ನಡೆದಿದೆ. ಇರಾನ್‌ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧ ಕೊನೆಗೊಳಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಬೇಡಿಕೊಂಡಿದ್ದೆಲ್ಲಾ ನೆರವೇರಬೇಕಾ? – ಮಂಗಳವಾರ ಹನುಮನ ಈ ರೀತಿ ಪೂಜಿಸಿ..!

ಅಮೆರಿಕಾ ಹಾಗೂ ಇರಾನ್‌ ನಡುವೆ ನಡೆಯುತ್ತಿದ್ದ ಯುದ್ಧಕ್ಕೆ ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 5 ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಿದ್ದರು. ಇದ್ರ ಬೆನ್ನಲ್ಲೇ ಪಾಕಿಸ್ತಾನದ ಮೂಲಕ ಇರಾನ್‌ ಜೊತೆ ಮಾತುಕತೆ ನಡೆಸಲು ಅಮೆರಿಕ ಮುಂದಾಗಿದೆ ಅನ್ನೋ ವಿಚಾರ ಬಯಲಾಗಿದೆ. ಈ ವಾರದಲ್ಲೇ ಅಮೆರಿಕ ಮತ್ತು ಇರಾನ್‌ ಹಿರಿಯ ಅಧಿಕಾರಿಗಳ ಮಧ್ಯೆ ಪಾಕಿಸ್ತಾನದಲ್ಲಿ ಮಾತುಕತೆ ನಡೆಯಲಿದೆ ಎಂದು ಇಸ್ರೇಲ್‌  ಮೂಲವನ್ನು ಆಧಾರಿಸಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.  ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ  ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಮೆರಿಕದ ಪರವಾಗಿ ಹಾಜರಾಗುವ ಸಾಧ್ಯತೆಯಿದೆ. ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಪಶ್ಚಿಮ ಏಷ್ಯಾ ಸಂಘರ್ಷವನ್ನು ಶಮನಗೊಳಿಸಲು ಎರಡೂ ಕಡೆಯವರನ್ನು ಮನವೊಲಿಸಿ ಮಾತುಕತೆ ನಡೆಸಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎನ್ನಲಾಗ್ತಿದೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ ರಾಜತಾಂತ್ರಿಕ ಸಂಪರ್ಕ ಸಹ ನಡೆಯುತ್ತಿದೆ. ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ಪ್ರತ್ಯೇಕ ಸಂಭಾಷಣೆ ನಡೆಸಿದ್ದಾರೆ.

ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರು ಇರಾನ್‌ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಮಾತುಕತೆ ವಿಚಾರದ ಬಗ್ಗೆ ಅಮೆರಿಕದ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಪ್ರತಿಕ್ರಿಯಿಸಿ, ಇವು ಸೂಕ್ಷ್ಮ ರಾಜತಾಂತ್ರಿಕ ಚರ್ಚೆಗಳಾಗಿವೆ ಮತ್ತು ಮಾಧ್ಯಮದ ಮೂಲಕ ಅಮೆರಿಕ ಮಾತುಕತೆ ನಡೆಸುವುದಿಲ್ಲ. ಸಭೆಗಳ ಕುರಿತಾದ ಊಹಾಪೋಹಗಳನ್ನು ಶ್ವೇತಭವನ ಅಧಿಕೃತವಾಗಿ ಘೋಷಿಸುವವರೆಗೆ ಅಂತಿಮವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.

Shwetha M