ಕೆಂಗೇರಿ ಕಸದ ರಾಶಿಯಲ್ಲಿ ಮಹಿಳೆಯ ಶವ – ಸಾಕ್ಷ್ಯ ನಾಶಕ್ಕೆ ಕೊಲೆಗಾರರು ಮಾಡಿದ ಪ್ಲ್ಯಾನ್ ಏನು ಗೊತ್ತಾ?

ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಬರ್ಬರ ಕೊಲೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮಹಿಳೆಯನ್ನು ಕೊಲೆ ಮಾಡಿ ರಸ್ತೆ ಪಕ್ಕದ ಕಸದ ರಾಶಿಯಲ್ಲಿ ಹಂತಕರು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಕೆಂಗೇರಿಯ ಮುಖ್ಯ ರಸ್ತೆಯಲ್ಲಿರುವ ಮೈಲ್ಸಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಮಹದೇಶ್ವರ ಬಡಾವಣೆಯ ನಿವಾಸಿಯಾದ ಕೆಂಪಮ್ಮ (45) ಎಂಬುವವರೇ ಕೊಲೆಯಾದ ದುರ್ದೈವಿ. ಹಂತಕರು ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರಸ್ತೆ ಪಕ್ಕದ ಕಸದ ರಾಶಿಯಲ್ಲಿ ಎಸೆದಿದ್ದಾರೆ. ಇಂದು ಮುಂಜಾನೆ ರಸ್ತೆಯಲ್ಲಿ ಓಡಾಡುತ್ತಿದ್ದ ಸ್ಥಳೀಯರು ಕಸದ ರಾಶಿಯಲ್ಲಿ ಮೃತದೇಹ ಇರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ! – ಶ್ವಾನಗಳ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋದ ಅಪಾರ್ಟ್ಮೆಂಟ್ ನಿವಾಗಳು!
ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ತಲೆಗೆ ಯಾವುದೋ ಭಾರವಾದ ವಸ್ತುವಿನಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಹಂತಕರು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಎಸೆದಿದ್ದಾರೆಯೇ ಅಥವಾ ಇಲ್ಲೇ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಬೆರಳಚ್ಚು ಹಾಗೂ ಇತರೆ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಮೃತ ಮಹಿಳೆ ಕೆಂಪಮ್ಮ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಹಳೆಯ ದ್ವೇಷ ಅಥವಾ ಹಣಕಾಸಿನ ವಿಚಾರವಾಗಿ ಈ ಕೊಲೆ ನಡೆದಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ನೋಡಿರಿ

