ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ – ಮೊದಲ ಬಾರಿಗೆ 93ರ ಗಡಿ ದಾಟಿದ ಮೌಲ್ಯ!

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ – ಮೊದಲ ಬಾರಿಗೆ 93ರ ಗಡಿ ದಾಟಿದ ಮೌಲ್ಯ!

ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಭಾರತಕ್ಕೆ ಮತ್ತೊಂದು ಆಘಾತ ತಟ್ಟಿದೆ. ಎಲ್ ಪಿಜಿ ಸಿಲಿಂಡರ್ ಗಳ ಕೊರತೆಯಿಂದ ಒದ್ದಾಡ್ತಿರೋ ಜನರಿಗೆ ಇನ್ಮುಂದೆ ದುಬಾರಿ ದುನಿಯಾ ಕೂಡ ಬರೆ ಎಳೆಯಲಿದೆ. ಯಾಕಂದ್ರೆ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ 93ರ ಗಡಿ ದಾಟಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರು ಹಣ ಹಿಂಪಡೆಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಜನಸಾಮಾನ್ಯರ ಬದುಕು ಮತ್ತಷ್ಟು ದುಬಾರಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಗಲ್ಫ್ ರಾಷ್ಟ್ರಗಳ ತೈಲ ಉತ್ಪಾದನಾ ಘಟಕಗಳ ಮೇಲೆ ದಾಳಿ – ಭಾರತದಲ್ಲಿ ಹೆಚ್ಚುತ್ತಾ ಪೆಟ್ರೋಲ್, ಗ್ಯಾಸ್ ಬೆಲೆ?

ಗುರುವಾರ ವಹಿವಾಟಿನ ವೇಳೆ, ಒಂದು ಡಾಲರ್‌ಗೆ 93.37 ರೂಪಾಯಿ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಇದಕ್ಕೂ ಮೊದಲು ಬುಧವಾರ 92.63 ರೂಪಾಯಿ ದಾಖಲಾಗಿದ್ದು, ಇದುವರೆಗಿನ ಕನಿಷ್ಠ ಮಟ್ಟವಾಗಿತ್ತು. ಕಚ್ಚಾತೈಲ ಬೆಲೆ ಏರಿಕೆ ಮತ್ತು ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿ ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಭಾರತ ತನ್ನ ತೈಲದ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ ಹೆಚ್ಚು ಡಾಲರ್‌ಗಳನ್ನು ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯುದ್ಧದ ಭೀತಿಯಿಂದ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಹಣ ಹಿಂಪಡೆದು ಡಾಲರ್‌ಗಳಲ್ಲಿ ಹೂಡಿಕೆ ಮಾಡುತ್ತಿರುವುದೂ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಪ್ರತಿ 10 ಡಾಲರ್ ಏರಿಕೆಯಾದಾಗ, ಹಣದುಬ್ಬರ ದರದಲ್ಲಿ 0.50% ಹೆಚ್ಚಳವಾಗುತ್ತದೆ.

ಮುಂದಿನ ಆರ್ಥಿಕ ವರ್ಷದ ಹಣದುಬ್ಬರ ದರವನ್ನು ಈ ಹಿಂದೆ 3.8% ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅದು 4.5% ಕ್ಕೆ ಏರುವ ಸಾಧ್ಯತೆಯಿದೆ ಎಂದು ನೊಮುರಾ ಸಂಸ್ಥೆಯ ಆರ್ಥಿಕ ತಜ್ಞೆ ಸೋನಲ್ ವರ್ಮಾ ಹೇಳಿದ್ದಾರೆ. ಆದರೂ, ದೇಶದ ಆರ್ಥಿಕ ಬೆಳವಣಿಗೆ 7% ಮಟ್ಟದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ರೂಪಾಯಿ ಮೌಲ್ಯ ಕುಸಿತದಿಂದಾಗಿ ಪೆಟ್ರೋಲ್, ಡೀಸೆಲ್, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಖಾದ್ಯ ತೈಲಗಳಂತಹ ಆಮದು ವಸ್ತುಗಳ ಬೆಲೆ ಏರಿಕೆಯಾಗಲಿದೆ. ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ವೆಚ್ಚ ಹೆಚ್ಚಾಗಲಿದೆ. ಹಣದುಬ್ಬರ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯಿಂದ ಡಾಲರ್‌ಗಳನ್ನು ಮಾರಾಟ ಮಾಡುವ ಸಾಧ್ಯತೆಯೂ ಇದೆ.

Shantha Kumari

Leave a Reply

Your email address will not be published. Required fields are marked *