ಕುಟುಂಬಕ್ಕೆ ಮಣೆಯೂ.. ಹೊಸಬರಿಗೆ ಹೊಣೆಯೋ – ಕಾಂಗ್ರೆಸ್ ಗೆ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕಗ್ಗಂಟು!
ದಾ.ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಪ್ರತಿಷ್ಠೆಯ ಆಟ!

ಕುಟುಂಬಕ್ಕೆ ಮಣೆಯೂ.. ಹೊಸಬರಿಗೆ ಹೊಣೆಯೋ – ಕಾಂಗ್ರೆಸ್ ಗೆ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕಗ್ಗಂಟು!ದಾ.ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಪ್ರತಿಷ್ಠೆಯ ಆಟ!

ರಾಜ್ಯದಲ್ಲಿ ಎರಡು ಕ್ಷೇತ್ರಗಳ ಉಪಚುನಾವಣೆ ಕಾವು ದಿನೇದಿನೆ ರಂಗೇರುತ್ತಿದೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಟಿಕೆಟ್ ಹಂಚಿಕೆಯೇ ಕಗ್ಗಂಟಾಗಿದೆ. ಮತ್ತೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಬೇಕೋ ಅಥವಾ ಹೊಸ ಅಭ್ಯರ್ಥಿ ಕಡೆ ಮುಖ ಮಾಡಬೇಕೋ ಗೊತ್ತಾಗಲದೇ ಗೊಂದಲದಲ್ಲಿದ್ದಾರೆ. ಇಲ್ಲಿ ಎರಡೂ ನಡೆಯೂ ಕೂಡ ಪರ-ವಿರೋಧದ ಜೊತೆಗೆ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಯಾಕಂದ್ರೆ ಈಗಾಗ್ಲೇ ಅಭ್ಯರ್ಥಿಗಳ ಅನೌನ್ಸ್ ಮಾಡಿ ಬಿಜೆಪಿ ಗೆಲುವಿನ ತಂತ್ರಗಾರಿಕೆ ಶುರು ಮಾಡಿಕೊಳ್ಳುತ್ತಿದ್ರೆ ಕಾಂಗ್ರೆಸ್ ಮನೆಯಲ್ಲಿ ಗೊಂದಲ ಇನ್ನೂ ಮುಗಿದಿಲ್ಲ.

ಇದನ್ನೂ ಓದಿ : ರಾಯಚೂರಿನಲ್ಲಿ ಮಠದಲ್ಲಿಯೇ ಸ್ವಾಮೀಜಿ ಆತ್ಮಹತ್ಯೆ – ಭಕ್ತರ ಅನುಮಾನಕ್ಕೆ ಕಾರಣವೇನು?

ಕಾಂಗ್ರೆಸ್ ಮನೆಯ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಹೆಚ್.ವೈ.ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ಕ್ಷೇತ್ರದಲ್ಲಿ ಏಪ್ರಿಲ್ 9ರಂದು ಬೈ ಎಲೆಕ್ಷನ್ ನಡೆಯಲಿದೆ. ಬಿಜೆಪಿ ಎರಡೂ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದ್ರೆ ಕಾಂಗ್ರೆಸ್ ಪಕ್ಷ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.‌ ಅದೂ ಅಲ್ಲದೆ ಎರಡೂ ಕ್ಷೇತ್ರಗಳಲ್ಲೂ ಈ ಹಿಂದೆ ಕಾಂಗ್ರೆಸ್ ಶಾಸಕರೇ ಇದ್ದ ಕಾರಣಕ್ಕೆ ಜೊತೆಗೆ ಈ ಕ್ಷೇತ್ರಗಳು ಕಾಂಗ್ರೆಸ್ ಭದ್ರಕೋಟೆಗಳೇ ಆಗಿವೆ. ಹೀಗಾಗಿ ಮರಳಿ ಕ್ಷೇತ್ರಗಳನ್ನ ವಶಪಡಿಸಿಕೊಳ್ಳೋಕೆ ಬಲಿಷ್ಠ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕಿದೆ. ಪ್ರತಿಷ್ಠೆಯಾಗಿರೋ ಈ ಚುನಾವಣೆ ಗೆಲ್ಲೋಕೆ ತಂತ್ರಗಾರಿಕೆಯೂ ನಡೀತಿದೆ.

ಕಾಂಗ್ರೆಸ್ ಟಿಕೆಟ್ ಗಾಗಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಅಭ್ಯರ್ಥಿಗಳ ಲಾಬಿ, ಒತ್ತಡ, ವಿರೋಧಗಳು ಜಾಸ್ತಿಯಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡವಂತೆ ಶಾಮನೂರು ಕುಟುಂಬ ಪಟ್ಟು ಹಿಡಿದರೆ, ಇತ್ತ ಮುಸ್ಲಿಂ‌ ಸಮುದಾಯ ತಮ್ಮವರಿಗೇ ಟಿಕೆಟ್ ಕೊಡಬೇಕು ಎಂದು ಹಠ ಹಿಡಿದಿದೆ. ಹೀಗಾಗಿ, ಕಾಂಗ್ರೆಸ್​​ಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವೇ ನಿರ್ಣಾಯಕರಾಗಿದ್ದಾರೆ.‌ ಹಾಗಾಗಿ, ಮುಸ್ಲಿಂ ಸಮುದಾಯದವರಿಗೇ ಟಿಕೆಟ್ ನೀಡುವಂತೆ ಒತ್ತಡ ತೀವ್ರವಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ಮುಸ್ಲಿಂ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಬೆಂಬಲಿಗರು ಪುತ್ರ ಸಮರ್ಥ್​ಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಈ ಸಂಬಂಧ ರಾಜ್ಯ ನಾಯಕರ ಜೊತೆ ಎರಡು ಮೂರು ಬಾರಿ ಸಭೆ ನಡೆಸಲಾಗಿದೆ. ಆದರೆ, ಇನ್ನೂ ರಾಜ್ಯ ಕಾಂಗ್ರೆಸ್​​ಗೆ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದರೆ ನಿರ್ಣಾಯಕ ಮುಸ್ಲಿಂ ಸಮುದಾಯ ಅಸಮಾಧಾನಗೊಂಡು ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ಆತಂಕ ಒಂದು ಕಡೆ ಆದರೆ, ಇತ್ತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದರೆ, ಶಾಮನೂರು ಕುಟುಂಬ ಕುಪಿತಗೊಂಡು ತಟಸ್ಥವಾಗುವ ಭೀತಿ ಎದುರಾಗಿದೆ. ಈಗಾಗಲೇ ಚುನಾವಣಾ ಉಸ್ತುವಾರಿ ಸಮಿತಿ ಸಭೆಯಲ್ಲಿ ರಾಜ್ಯ ನಾಯಕರ ಎದುರು ಹೈಡ್ರಾಮಾವೇ ನಡೆದಿದೆ. ಉಭಯ ನಾಯಕರ ಬೆಂಬಲಿಗರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಯಾರಿಗೇ ಟಿಕೆಟ್ ಕೊಟ್ಟರೂ ಬಂಡಾಯದ ಬಿಸಿ ತಟ್ಟುವ ಆತಂಕ ಎದುರಾಗಿದೆ.

ಬಾಗಲಕೋಟೆಯಲ್ಲೂ ಇದಕ್ಕಿಂತ ಭಿನ್ನವಾಗಿಲ್ಲ. ದಿವಂಗತ ಹೆಚ್.ವೈ.ಮೇಟಿಯವರ ಮಕ್ಕಳಲ್ಲೇ ಟಿಕೆಟ್​​ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವುದು ಖಚಿತವಾಗಿದೆ. ಆದರೆ, ಕುಟುಂಬಸ್ಥರಲ್ಲೇ ತೀವ್ರ ಪೈಪೋಟಿ ಉಂಟಾಗಿರುವ ಕಾರಣ ಯಾರಿಗೆ ಟಿಕೆಟ್ ನೀಡುವುದು ಎಂಬ ಗೊಂದಲಕ್ಕೆ ರಾಜ್ಯ ಕೈ ನಾಯಕರು ಸಿಲುಕಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲೂ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯವಾಗಿಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯ ಮೇಟಿ ಮಕ್ಕಳಿಗೆ ಬುಲಾವ್ ನೀಡಿ ಮಾಜಿ ಸಚಿವ ಎಚ್.ವೈ.ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಮಹಾದೇವಿ ಮೇಟಿ, ಬಾಯಕ್ಕ ಜೊತೆ ಚರ್ಚೆ ನಡೆಸಿದರು. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಹೆಚ್.ವೈ.ಮೇಟಿ ಕುಟುಂಬದ ಮೂರು ಜನ ಟಿಕೆಟ್ ಕೇಳುತ್ತಿದ್ದರು. ಮಲ್ಲಿಕಾರ್ಜುನ, ಉಮೇಶ್, ಮಹಾದೇವಿ ಟಿಕೆಟ್ ಕೋರಿದ್ದಾರೆ. ಮೂರು ಜನರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡಬೇಕು ಅಂತ ಹೇಳಿದ್ದೇನೆ‌. ಅದಕ್ಕೆ ಒಪ್ಪಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಆದರೆ, ಮೇಟಿ ಪುತ್ರಿ ಮಹಾದೇವಿ ಟಿಕೆಟ್​ಗೆ ಪಟ್ಟು ಹಿಡಿದಿದ್ದು, ಒಮ್ಮತಕ್ಕೆ ಒಪ್ಪಿಲ್ಲ.

ತಮ್ಮದೇ ಶಾಸಕರನ್ನು ಕಳೆದುಕೊಂಡಿರೋ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ರೆ ಆಡಳಿತಾರೂಢ ಸರ್ಕಾರಕ್ಕೆ ಮುಜುಗರ ಉಂಟು ಮಾಡಲಿದೆ. ಅಭ್ಯರ್ಥಿಗಳು ಸೋತರೆ ಆಡಳಿತ ವಿರೋಧಿ ಅಲೆ ಜೋರಾಗಿದೆ ಎಂಬ ಸಂದೇಶ ರವಾನೆಯಾಗಲಿದೆ. ಹೀಗಾಗಿಯೇ ರಾಜ್ಯ ಸರ್ಕಾರಕ್ಕೆ ಇದು ಪ್ರತಿಷ್ಠೆಯ ಉಪಸಮರವಾಗಿ ಪರಿಣಮಿಸಿದೆ. ಇನ್ನು ಎರಡು ಕ್ಷೇತ್ರಗಳಿಗೆ ಮಾ.16ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮಾ.23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.24ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾ.26ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

Shantha Kumari

Leave a Reply

Your email address will not be published. Required fields are marked *