ಶಕುನಿ ತನ್ನ ಕುಟುಂಬದ ಸಾವಿನ ಸೇಡು ತೀರಿಸಿಕೊಂಡಿದ್ದು ಹೇಗೆ? – ಒಂದು ಮುಷ್ಠಿ ಆಹಾರ ತಿಂದು ಬದುಕಿ ಮಾಡಿದ್ದೇನು ಗೊತ್ತಾ?

ಶಕುನಿ ತನ್ನ ಕುಟುಂಬದ ಸಾವಿನ ಸೇಡು ತೀರಿಸಿಕೊಂಡಿದ್ದು ಹೇಗೆ? –  ಒಂದು   ಮುಷ್ಠಿ ಆಹಾರ ತಿಂದು ಬದುಕಿ ಮಾಡಿದ್ದೇನು ಗೊತ್ತಾ?

ನಾವು ಲೇಖನದಲ್ಲಿ ಮಹಾಭಾರತದಲ್ಲಿ ಕುತಂತ್ರಿ ಶಕುನಿ ತನ್ನ ಕುಟುಂಬದ ಸಾವಿನ ಸೇಡು ತೀರಿಸಿಕೊಂಡಿದ್ದು ಹೇಗೆ?ಒಂದು   ಮುಷ್ಠಿ ಆಹಾರ ತಿಂದು ಬದುಕಿ ಮಾಡಿದ್ದೇನು ಗೊತ್ತಾ? ಅನ್ನೋದ್ದನ್ನ ತಿಳಿಯೋಣ ಬನ್ನಿ

ಮಹಾಭಾರತ ಕಥೆಯ ಪ್ರಕಾರ, ಶಕುನಿ ಗಾಂಧಾರ ರಾಜ್ಯಕ್ಕೆ ಸೇರಿದವನು. ಶಕುನಿಯ ತಂದೆ ಸುಬಲ, ಈತ ಗಾಂಧಾರ ರಾಜ್ಯದ ರಾಜನಾಗಿದ್ದ. ರಾಜ ಸುಬಲನಿಗೆ ಕೇವಲ ಶಕುನಿ ಮಾತ್ರವಲ್ಲ, ಓರ್ವ ಮಗಳೂ ಇದ್ದಳು. ಆಕೆಯ ಹೆಸರೇ ಗಾಂಧಾರಿ. ಈಕೆಯ ಜಾತಕದಲ್ಲಿ ಒಂದು ದೋಷವಿತ್ತು. ಅದೇನೆಂದರೆ ಗಾಂಧಾರಿಯನ್ನು ಯಾರು ಮೊದಲು ವಿವಾಹವಾಗುತ್ತಾರೋ ಅವರು ಮರಣ ಹೊಂದುತ್ತಾರೆ ಎಂಬುದಾಗಿತ್ತು. ಈ ಕಾರಣ್ಕಕಾಗಿ ಯಾವ ರಾಜರೂ ಗಾಂಧಾರಿಯನ್ನು ಮದುವೆಯಾಗಲು ಮುಂದೆ ಬರಲಿಲ್ಲ. ಆಗ ಸುಬಲನು ತನ್ನ ಮಗಳ ಜಾತಕದಲ್ಲಿನ ದೋಷವನ್ನು ತೆಗೆದುಹಾಕುವುದಕ್ಕೆ ಆಕೆಯನ್ನು ಒಂದು ಮೇಕೆಯೊಂದಿಗೆ ಮದುವೆ ಮಾಡಿಸುತ್ತಾನೆ. ನಂತರ ಅವನೇ ಆ ಮೇಕೆಯನ್ನು ಕೊಲ್ಲುತ್ತಾನೆ. ಈ ಮೂಲಕ ಗಾಂಧಾರಿಯ ಜಾತಕದಲ್ಲಿದ್ದ ದೋಷ ನಿವಾರಣೆಯಾಯಿತು.

ಇದರ ಬಳಿಕ ರಾಜ ಸುಬಲನು ತನ್ನ ಮಗಳಾದ ಗಾಂಧಾರಿಯ ಮದುವೆಯನ್ನು ಮತ್ತೊಮ್ಮೆ ಮಾಡಿಸಲು ಮುಂದಾಗುತ್ತಾನೆ. ಹಾಗೂ ಆಕೆಯನ್ನು ಧೃತರಾಷ್ಟನಿಗೆ ನೀಡಿ ಮದುವೆಯನ್ನು ಮಾಡುತ್ತಾನೆ. ಧೃತರಾಷ್ಟ್ರನು ಕುರುಡನಾಗಿದ್ದ ಕಾರಣ, ಶಕುನಿ ಗಾಂಧಾರಿ ಮತ್ತು ಧೃತರಾಷ್ಟ್ರನ ವಿವಾಹವನ್ನು ವಿರೋಧಿಸುತ್ತಾನೆ. ಆದರೆ ಸಬಲ ಶಕುನಿಯ ಮಾತನ್ನು ಕೇಳದೆ ಇಬ್ಬರ ವಿವಾಹವನ್ನು ಮಾಡಿಸುತ್ತಾನೆ.

ಮದುವೆಯ ಬಳಿಕ ಧೃತರಾಷ್ಟ್ರನಿಗೆ ತಾನು ಗಾಂಧಾರಿಯ ಎರಡನೇ ಗಂಡ ಎನ್ನುವ ವಿಚಾರ ತಿಳಿಯುತ್ತದೆ. ಆಗ ಅವನು ಗಾಂಧಾರಿಯ ಎಲ್ಲಾ ಕುಟುಂಬದ ಸದಸ್ಯರ ಮೇಲೆ ಕೋಪಗೊಂಡು ಅವರನ್ನು ಜೈಲಿಗೆ ತಳ್ಳುತ್ತಾನೆ. ತನ್ನ ಸೆರೆಯಲ್ಲಿದ್ದ ಶಕುನಿ, ಅವನ ತಂದೆ ಹಾಗೂ ಆತನ ಸಹೋದರರಿಗೆ ಪ್ರತಿನಿತ್ಯ ಕೇವಲ ಒಂದು ಮುಷ್ಠಿ ಆಹಾರವನ್ನು ನೀಡುತ್ತಾನೆ. ಆಹಾರವಿಲ್ಲದೆ ಶಕುನಿಯ ಕುಟುಂಬದಲ್ಲಿ ಒಬ್ಬೊಬ್ಬರೇ ಸಾವನ್ನಪ್ಪತೊಡಗಿದರು. ಶಕುನಿಯ ಚಾಣಾಕ್ಷತನವನ್ನು ಅರಿತಿದ್ದ ಆತನ ತಂದೆ ಅವನಿಗೆ ಧೃತರಾಷ್ಟ್ರನ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾದರೂ ನೀನು ಬದುಕಿರಬೇಕೆಂದು ಎಲ್ಲಾ ಆಹಾರವನ್ನು ಶಕುನಿಗೆ ನೀಡಿ ಅವನ ಜೀವವನ್ನು ಉಳಿಸಿದರು. ತನ್ನ ಕುಟುಂಬ ಆಹಾರವಿಲ್ಲದೆ ಸಾಯುತ್ತಿರುವುದನ್ನು ಕಂಡ ಶಕುನಿ ಅಂದೇ ಧೃತರಾಷ್ಟ್ರನ ಕುಟುಂಬವನ್ನು ನಾಶ ಮಾಡುವ ಪಣತೊಟ್ಟನು

ಶಕುನಿ ಬದುಕುಳಿದಿರಬಹುದು ಆದರೆ ಅವನ ಕಣ್ಣುಗಳ ಮುಂದೆ ಯಾವಾಗಲೂ ಅವನ ಕುಟುಂಬ ಹಸಿವಿನಿಂದ ನರಳಿ ಮರಣ ಹೊಂದಿರುವ ದೃಶ್ಯಗಳೇ ಬರುತ್ತಿತ್ತು. ಶಕುನಿಯ ತಂದೆಯಾದ ರಾಜ  ಸುಬಲ ಮರಣ ಹೊಂದುವುದಕ್ಕೂ ಮುನ್ನ ತನ್ನ ಮಗನಾದ ಶಕುನಿಯ ಬಳಿ ಒಂದು ರಹಸ್ಯವನ್ನು ಹೇಳುತ್ತಾನೆ. ಅದೇನೆಂದರೆ, ತನ್ನ ಮರಣದ ನಂತರ, ಮೂಳೆಗಳಿಂದ ಪಗಡೆಗಳನ್ನು ಮಾಡಬೇಕು, ಅದು ನಿನಗೆ ಮಾತ್ರ ವಿಧೇಯವಾಗಿರುತ್ತದೆ ಮತ್ತು ಯಾರೂ ನಿನ್ನನ್ನು ಜೂಜಾಟದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದನು.

ನಂತರ, ಕೌರವರು ಮತ್ತು ಪಾಂಡವರ ನಡುವೆ ಜೂಜಾಟ ನಡೆಯಿತು. ಅದೇ ಪಗಡೆಯಾಟದಲ್ಲಿ ಶಕುನಿ ಕೌರವರ ಪರವಾಗಿ ಗೆದ್ದು ಪಾಂಡವರನ್ನು ಸೋಲಿಸಿ ಅವರಿಂದ ಎಲ್ಲವನ್ನೂ ಕಸಿದುಕೊಂಡನು. ಇದರ ನಂತರ, ಮಹಾಭಾರತ ಯುದ್ಧ ನಡೆದು ಕೌರವ ರಾಜವಂಶ ಕೊನೆಗೊಂಡಿತು. ಈ ರೀತಿಯಾಗಿ, ಶಕುನಿ ಧೃತರಾಷ್ಟ್ರನ ಎಲ್ಲಾ ಪುತ್ರರನ್ನು ಕೊಲ್ಲುವ ಮೂಲಕ ತನ್ನ ಕುಟುಂಬದ ಸಾವಿಗೆ ಸೇಡು ತೀರಿಸಿಕೊಂಡನು.

Kishor KV