13 ವರ್ಷಗಳ ಜೀವನ್ಮರಣ ಹೋರಾಟಕ್ಕೆ ಹೆತ್ತವರಿಂದ ಬೀಳ್ಕೊಡುಗೆ – ದಯಾಮರಣದ ಮೂಲಕ ಮಗನ ನೋವಿಗೆ ಮುಕ್ತಿ..!

ತಂದೆ ತಾಯಿಯೆದುರು ಹೆತ್ತ ಮಕ್ಕಳು ಸಾಯಬಾರದು. ಹೆತ್ತವರಿಗೆ ಮಕ್ಕಳು ಆಸರೆಯಾಗಿರಬೇಕು. ಆ ಹೆತ್ತವರಿಗೂ ಅಷ್ಟೇ. ಇದ್ದೊಬ್ಬ ಮಗ ಆಸರೆಯಾಗುತ್ತಾನೆ ಎಂಬ ನಂಬಿಕೆಯಿತ್ತು. ಮಗ ಕೂಡಾ ಚೆನ್ನಾಗಿಯೇ ಓದುತ್ತಿದ್ದ. ಆದರೆ, ವಿಧಿಲೀಲೆ ಅನ್ನೋದು ಇದೆಯೆಲ್ಲಾ.. ಹೆತ್ತವರು ಅನುಭವಿಸಿದ್ದು ಬರೋಬ್ಬರಿ 13 ವರ್ಷಗಳ ಕಾಲ ನರಕಯಾತನೆ. ಕೊನೆಗೂ ಅಪ್ಪ ಅಮ್ಮ ಮಗನ ನೋವು ಮತ್ತು ತಮ್ಮ ನೋವಿಗೆ ಮುಕ್ತಿ ನೀಡಿದ್ದಾರೆ. ಹೆತ್ತವರ ಜೊತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೂಡಾ ಕಣ್ಣೀರು ಹಾಕಿರುವ ದೇಶದ ಮೊಟ್ಟ ಮೊದಲ ಪ್ರಕರಣವಿದು.
ಇದನ್ನೂ ಓದಿ:ಒಡಿಶಾದ SBA ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ – 10ಕ್ಕೂ ಹೆಚ್ಚು ರೋಗಿಗಳು ಸಾ*ವು, 11 ಜನಕ್ಕೆ ಗಂಭೀರ ಗಾಯ
13 ವರ್ಷಗಳು.. ಮಗ ಚಲನೆಯಿಲ್ಲದೇ ಮಲಗಿದ್ದ. ಹೆತ್ತವರಿಗೆ ಮಗನ ಬಗ್ಗೆ ನಿರೀಕ್ಷೆ ಬತ್ತಿ ಹೋಗಿತ್ತು.. ಮಗನ ಚಾಕರಿಯಲ್ಲಿ ದಿನ ದೂಡುತ್ತಿದ್ದವರು ಇದ್ದ ಮನೆಯನ್ನೂ ಮಾರಾಟ ಮಾಡಿದರು. ಮಗನ ಚಿಕಿತ್ಸೆಗಾಗಿ ಇದ್ದಬದ್ದ ಸಂಪತ್ತೆಲ್ಲಾ ಕರಗಿಹೋಗಿತ್ತು. ಉಟ್ಟಬಟ್ಟೆ ಬಿಟ್ಟರೆ ಹೆತ್ತವರಿಗೆ ಏನೂ ಉಳಿದಿಲ್ಲ. ಕೊನೆಗೆ ಮಗನೂ ಕೂಡಾ.. ಇದೊಂಥರಾ ವಿಧಿಯಾಟ.. ದೇಶಕ್ಕೆ ದೇಶವೇ ಮಮ್ಮಲ ಮರುಗಿದ ಹೃದಯವಿದ್ರಾವಕ ಘಟನೆ.
ಚಲನವಲನವಿಲ್ಲದೆ ಹಾಸಿಗೆಯಲ್ಲೇ ಮಲಗಿದ್ದ ಹರೀಶ್ ರಾಣಾ ಅವರ ಸುದೀರ್ಘ ಹೋರಾಟಕ್ಕೆ ನ್ಯಾಯಲಯ ಮುಕ್ತಿ ನೀಡಿದೆ. ಮಗನ ಈ ನರಕಯಾತನೆಯನ್ನು ನೋಡಲಾರದೆ ದಯಾಮರಣ ಕೋರಿ ತಂದೆ ಸಲ್ಲಿಸಿದ್ದ ಅರ್ಜಿಗೆ ನ್ಯಾಯ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಿಂದ ದಯಾಮರಣಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಹರೀಶ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಮಂಡಳಿಯ ಮೇಲ್ವಿಚಾರಣೆಯಲ್ಲಿ ದಯಾಮರಣ ನೀಡುವ ಕಾನೂನಾತ್ಮಕ ಪ್ರಕ್ರಿಯೆಗಳು ಅಧಿಕೃತವಾಗಿ ಆರಂಭವಾದವು. ವೈದ್ಯರ ಮೇಲ್ವಿಚಾರಣೆಯಲ್ಲಿ ಹರೀಶ್ ಅವರ ಜೀವರಕ್ಷಕ ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಲಾಯಿತು.
ಹರೀಶ್ ರಾಣಾ ಅವರ ಜೀವನದಲ್ಲಿ 2013ರಲ್ಲಿ ಘೋರ ದುರಂತ ಸಂಭವಿಸಿತ್ತು. ಆಗ ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಒಂದು ದಿನ ಅವರು ವಾಸಿಸುತ್ತಿದ್ದ ಪೇಯಿಂಗ್ ಗೆಸ್ಟ್ ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ವರ್ಷಗಳ ಚಿಕಿತ್ಸೆಯ ಬಳಿಕವೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಹರೀಶ್ ರಾಣಾ ಶಾಶ್ವತ ಕೋಮಾ ಸ್ಥಿತಿಗೆ ತಲುಪಿದ್ದರು. ಕಳೆದ 13 ವರ್ಷಗಳಿಂದ ಅವರು ಸಂಪೂರ್ಣವಾಗಿ ಯಂತ್ರಗಳ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದರು. ಅವರ ಆಹಾರ ಮತ್ತು ದೈಹಿಕ ಚಲನೆಗಳಿಗೂ ವೈದ್ಯಕೀಯ ಸಾಧನಗಳೇ ಅವಲಂಬನೆಯಾಗಿದ್ದವು. ಈ ಪರಿಸ್ಥಿತಿ ಕುಟುಂಬದ ಮೇಲೆ ಭಾರೀ ಮಾನಸಿಕ ಮತ್ತು ಭಾವನಾತ್ಮಕ ಒತ್ತಡವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ, ಹರೀಶ್ ರಾಣಾ ಅವರ ಪೋಷಕರು ಸುಪ್ರೀಂ ಕೋರ್ಟ್‌ನಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ತಮ್ಮ ಮಗನಿಗೆ ಇನ್ನೂ ನೋವುಂಟಾಗಬಾರದು ಮತ್ತು ಗೌರವಯುತ ಸಾವು ದೊರಕಬೇಕು ಎಂಬ ಕಾರಣದಿಂದ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಹಲವು ವೈದ್ಯಕೀಯ ವರದಿಗಳು ಮತ್ತು ಪರಿಣಿತರ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಈ ಅರ್ಜಿಯನ್ನು ಅಂಗೀಕರಿಸಿತು. 13 ವರ್ಷಗಳ ಕಾಲ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಅವರ ಅರ್ಜಿ ಪರಿಶೀಲಿಸಿ ದಯಾಮರಣದ ಬಗ್ಗೆ ಆದೇಶ ನೀಡುವಾಗ ನ್ಯಾಯಮೂರ್ತಿಗಳು ಕೂಡಾ ಕಣ್ಣೀರು ಹಾಕಿದರು. ಇದು ಭಾರತದಲ್ಲಿ ನ್ಯಾಯಾಲಯ ನೀಡಿದ ಮೊಟ್ಟ ಮೊದಲ ಪ್ರಕರಣವೂ ಹೌದು.
ಹರೀಶ್ ರಾಣಾ ಅವರ ಕುಟುಂಬ ಗಾಜಿಯಾಬಾದ್‌ನ ರಾಜ್ ಎಂಪೈರ್ ಸೊಸೈಟಿಯಲ್ಲಿ ವಾಸಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಹರೀಶ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ ನೆರೆಹೊರೆಯವರು ಮತ್ತು ಸ್ನೇಹಿತರು ಈ ಸುದ್ದಿಯಿಂದ ಮೌನವಾಗಿದ್ದರು. ಹರೀಶ್ ಅವರ ತಂದೆ ಅಶೋಕ್ ರಾಣಾ ತಮ್ಮ ನೋವನ್ನು ಮರೆಮಾಚಲು ಪ್ರಯತ್ನಿಸಿದರೂ, ಅವರ ಕಣ್ಣುಗಳಲ್ಲಿ ದುಃಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಮ್ಮ ಮಗ ಈಗ ನಮ್ಮನ್ನು ಬಿಟ್ಟು ಹೋಗುತ್ತಿದ್ದಾನೆ. ಆದರೆ ಅವನಿಗೆ ಗೌರವಯುತ ಸಾವು ದೊರೆಯುವುದು ಮಾತ್ರ ನಮಗೆ ಸ್ವಲ್ಪ ಸಮಾಧಾನ ನೀಡುತ್ತಿದೆ, ಎಂದು ಅವರು ಹೇಳಿದ್ದಾರೆ. ಶನಿವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಅಶೋಕ್ ರಾಣಾ ಮತ್ತು ಕುಟುಂಬದವರು ಹರೀಶ್ ಅವರನ್ನು ಖಾಸಗಿ ವಾಹನದಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರ ತಂಡ ಅವರ ಸ್ಥಿತಿಯನ್ನು ಪರಿಶೀಲಿಸಿ ಜೀವರಕ್ಷಕ ವ್ಯವಸ್ಥೆಯನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಆರಂಭಿಸಿತು. ವೈದ್ಯರ ಪ್ರಕಾರ, ಹರೀಶ್ ಇನ್ನೂ ಉಸಿರಾಟ, ಆಹಾರ ಮತ್ತು ದೈಹಿಕ ಚಲನೆಗಳಿಗಾಗಿ ಟ್ಯೂಬ್‌ಗಳಿಗೆ ಸಂಪರ್ಕ ಹೊಂದಿದ್ದರು. ಈ ಎಲ್ಲ ವ್ಯವಸ್ಥೆಗಳನ್ನು ವೈದ್ಯಕೀಯ ಪ್ರೋಟೋಕಾಲ್‌ಗಳ ಪ್ರಕಾರ ಹಂತ ಹಂತವಾಗಿ ತೆಗೆದುಹಾಕಲಾಗುತ್ತದೆ ಎಂದು ವೈದ್ಯರು ತಿಳಿಸಿದರು.

ನೋಡಿರಿ

