ಸಿದ್ದು ಸರ್ಕಾರದಲ್ಲಿ 35 ಸಾವಿರ ಕೋಟಿ ಅವ್ಯವಹಾರ – ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್..!

ಸಿದ್ದು ಸರ್ಕಾರದಲ್ಲಿ 35 ಸಾವಿರ ಕೋಟಿ ಅವ್ಯವಹಾರ – ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್..!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸ್ಫೋಟಕ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಅಂತಾ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ 35 ಸಾವಿರ ಕೋಟಿಯಷ್ಟು ಅವ್ಯವಹಾರ ನಡೆದಿದೆ. ಯಾವುದೇ ಯೋಜನೆಯಲ್ಲಿ ಭ್ರಷ್ಟಾಚಾರ ಹೇಗೆ ಅಡಗಿತ್ತು ಎಂಬುದನ್ನು ಕಾಂಗ್ರೆಸ್ ಆಡಳಿತ ಇದ್ದಾಗ ನೋಡಿದ್ದೇವೆ ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ 300 ಕಡೆ ಕಾಂಗ್ರೆಸ್ ಪ್ರತಿಭಟನೆ – ಟ್ರಾಫಿಕ್ ಜಾಮ್, ಪೊಲೀಸ್ ಹೈ ಅಲರ್ಟ್!

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇಂದಿರಾ ಕ್ಯಾಂಟೀನ್​ ಆರಂಭಿಸಿ ಊಟದಲ್ಲೂ ಕಮಿಷನ್​ ಹೊಡೆದರು ಎಂದು ಕಾಂಗ್ರೆಸ್​ ವಿರುದ್ಧ ಸಚಿವ ಡಾ.ಸುಧಾಕರ್ ಆರೋಪ ಮಾಡಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ವಿದ್ಯಾರ್ಥಿಗಳಿಗೆ ಲ್ಯಾಪ್​​ಟಾಪ್​​​ ವಿತರಣೆಯಲ್ಲಿ ಭ್ರಷ್ಟಾಚಾರ ಆಗಿಲ್ವಾ? ಕಾಂಗ್ರೆಸ್​ನವರು ಸತ್ಯಹರಿಶ್ಚಂದ್ರನ ರೀತಿ ಹೇಳುತ್ತಾರೆ ಎಂದು ಸುಧಾಕರ್ ಆರೋಪಿಸಿದ್ದಾರೆ. ಯಾವುದೇ ಯೋಜನೆಯಲ್ಲೂ ಭ್ರಷ್ಟಾಚಾರ ಹೇಗೆ ಅಡಗಿತ್ತು ಅನ್ನೋದನ್ನ ಕಾಂಗ್ರೆಸ್ ಆಡಳಿತ ಇದ್ದಾಗ ನೋಡಿದ್ದೇವೆ. ಈಗ ರಾಜ್ಯದ ಮೂಲೆ ಮೂಲೆಗೆ ಹೋಗಿ ಬಿಜೆಪಿ ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ಹೇಳುವ ತವಕದಲ್ಲಿದ್ದಾರೆ. ಕಾಂಗ್ರೆಸ್ 2013ರ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ತಡೆಯುವುದಾಗಿ ಹೇಳಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಲೋಕಾಯುಕ್ತ ತೆಗೆದು ಎಸಿಬಿ ರಚನೆ ಮಾಡಿದ್ರು. ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ದೂರು ದಾಖಲಾದಾಗ ತನಿಖೆ ಎದುರಿಸಬೇಕಾಗುತ್ತದೆ ಅಂತಾ ಏಕಾಏಕಿ ಎಲ್ಲೂ ಚರ್ಚೆ ಮಾಡದೆ ರಾತ್ರೋರಾತ್ರಿ ಎಸಿಬಿ ಜಾರಿಗೆ ತಂದರು ಎಂದಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡುತ್ತಿರೋ 40 ಪರ್ಸೆಂಟ್ ಕಮಿಷನ್ ವಿಚಾರವಾಗಿಯೂ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ. 5% ಟೆಂಡರ್ ಪ್ರೀಮಿಯಂ ತೆಗೆದುಕೊಳ್ಳುವ ಕಂಟ್ರಾಕ್ಟರ್ 40% ಕೊಡಲು ಸಾಧ್ಯವೇ? ಕಾಂಗ್ರೆಸ್ ಕಾಲದಲ್ಲಿ ಬಿಬಿಎಂಪಿ ವ್ಯಾಪ್ತಿಯ ಅನೇಕ ಟೆಂಡರ್ ನೋಡಿದ್ದೇನೆ. ಎಲ್ಲವೂ 30% ನಿಂದ 50%ವರೆಗೂ ಇದೆ. ನಮ್ಮ ಮೇಲಿನ ಆರೋಪಕ್ಕೆ ಇವರು ಯಾವುದೇ ದಾಖಲೆ ಕೊಡುವ ಕೆಲಸ ಮಾಡಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಹಾಗೇ ಬೆಂಗಳೂರಿನ ವಿಚಾರವಾಗಿಯೂ ಸಾಲು ಸಾಲು ಆರೋಪ ಮಾಡಿದ್ದಾರೆ.  900 ಎಕರೆಗೂ ಹೆಚ್ಚು ಜಾಗ ಡಿ ನೋಟಿಫಿಕೇಷನ್ ಮಾಡಿ 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. ಇದಕ್ಕಾಗಿ ಲೋಕಾಯುಕ್ತ ಮುಚ್ಚಿ ಎಸಿಬಿ ತೆರೆದರು.

ಬೆಂಗಳೂರಿನ ಬೆಳ್ಳಂದೂರು ನೊರೆ ವಿಚಾರವಾಗಿ ಸಿದ್ದರಾಮಯ್ಯರನ್ನ ಕೇಳಿದ್ರೆ ಅದು ಯಾವಾಗ್ಲೂ ಆಗುತ್ತೆ ಬಿಡ್ರಿ ಅಂತಾ ಉಡಾಫೆಯಾಗಿ ಉತ್ತರಿಸಿದ್ರು.  ನಿಮ್ಮ ಬೆನ್ನು ಬಹಳ ದೊಡ್ಡದಿದೆ. ಒಮ್ಮೆ ಅದನ್ನ ಮುಟ್ಟಿ ನೋಡಿಕೊಳ್ಳಿ. ಎಷ್ಟು ಜನ ಬೇಲ್ ಮೇಲಿದ್ದೀರಿ, ಹೊರಗಿದ್ದೀರಿ. ಕನ್ನಡಿ ಮುಂದೆ ನಿಂತು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ. ನನಗೆ ನೈತಿಕತೆ ಇದೆಯಾ ಅಂತ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕೊರೊನಾ ವೇಳೆ ಲೂಟಿ ಹೊಡೆದವರು ಯಾರು? ಲಸಿಕೆ, ಔಷಧಿ, ಹಾಸಿಗೆಯಲ್ಲಿ ಹಣ ಮಾಡಿದ್ದು ಇವರೇ ಅಲ್ಲವಾ? ಸುಧಾಕರ್ ಮೊದಲು ಯಾರ ಪಕ್ಷದಲ್ಲಿ ಇದ್ದರು. ಈಗ ನಮ್ಮ ವಿರುದ್ಧ ಮಾತನಾಡ್ತಾರಾ? ಕಾಂಗ್ರೆಸ್​​ನವರು ಕನ್ನಡಿ ನೋಡಿಕೊಳ್ಳಲಿ ಎಂಬ ಸುಧಾಕರ್ ಹೇಳಿಕೆಗೂ ಸಿದ್ದು ಟಾಂಗ್ ಕೊಟ್ಟಿದ್ದಾರೆ. ದಿನಾಲು ನಾನು ಕನ್ನಡಿ ನೋಡಿಕೊಂಡೇ ತಲೆ ಬಾಚಿಕೊಳ್ಳೋದು. ಬೇಕಿದ್ರೆ ಅವರೇ ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ

 

suddiyaana