ಋತುಚಕ್ರ ರಜೆ ಕಡ್ಡಾಯ ಕಾನೂನು ಮಹಿಳೆಯರ ವೃತ್ತಿಜೀವನದ ಮೇಲೆ ಎಫೆಕ್ಟ್ ಬೀಳುತ್ತೆ – ಸುಪ್ರೀಂ ಕೋರ್ಟ್

ಋತುಚಕ್ರ ರಜೆ ಕಡ್ಡಾಯ ಕಾನೂನು ಮಹಿಳೆಯರ ವೃತ್ತಿಜೀವನದ ಮೇಲೆ ಎಫೆಕ್ಟ್ ಬೀಳುತ್ತೆ – ಸುಪ್ರೀಂ ಕೋರ್ಟ್

ಋತುಚಕ್ರ ರಜೆ ಕಡ್ಡಾಯ ಕಾನೂನು ಮಹಿಳೆಯರ ವೃತ್ತಿಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.ಕಡ್ಡಾಯ ಋತುಚಕ್ರ ರಜೆ ಕುರಿತು ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಶೈಲೇಂದ್ರ ಮಣಿ ತ್ರಿಪಾಠಿ ಎಂಬವರ ಪರವಾಗಿ ಹಿರಿಯ ವಕೀಲ ಎಂ.ಆರ್.ಶಂಶಾದ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆ ನಡೆಸಿತು.

ಋತುಚಕ್ರ ರಜೆ ಕಡ್ಡಾಯ ಕಾನೂನು ರೂಪಿಸುವ ಮೊದಲು ಉದ್ಯೋಗ ಮಾರುಕಟ್ಟೆಯ ಪ್ರಾಯೋಗಿಕ ವಾಸ್ತವಗಳನ್ನು ಪರಿಗಣಿಸುವ ಅಗತ್ಯವಿದೆ. ಜೊತೆಗೆ, ಈ ಕುರಿತು ಮಹಿಳೆಯರಲ್ಲಿ ಕೀಳರಿಮೆ ಭಾವನೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ ಎಂದು ಕೋರ್ಟ್ ಒತ್ತಿ ಹೇಳಿದೆ.ಕೆಲವು ನೈಸರ್ಗಿಕ ಸಮಸ್ಯೆಗಳಿಂದ ಮಹಿಳೆಯರು ಪುರುಷರೊಂದಿಗೆ ಸಮನಾಗಿರಲು ಸಾಧ್ಯವಿಲ್ಲ. ಜೊತೆಗೆ, ಒಂದು ನಿರ್ದಿಷ್ಟ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಇದು ಮೂಡಿಸಲಿದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಡಿವೋರ್ಸ್‌ ಆದ ಮಹಿಳೆ ಜೊತೆ ಲಿವ್‌-ಇನ್‌ನಲ್ಲಿದ್ದ.. ಈಗ ಬೇರೊಬ್ಬಳ ಜೊತೆ ಮದುವೆ! – ಕಾನ್‌ಸ್ಟೇಬಲ್‌ ಕಳ್ಳಾಟಕ್ಕೆ ಮಹಿಳೆ ಬಲಿ!

ಉದ್ಯೋಗ ಮಾರುಕಟ್ಟೆಯ ಪ್ರಾಯೋಗಿಕ ವಾಸ್ತವತೆಯನ್ನು ಪರಿಗಣಿಸಬೇಕು. ಮಾನವ ಸಂಪನ್ಮೂಲ ಕಡಿಮೆ ಇದ್ದರೆ, ಆಯ್ಕೆಯ ಸಾಧ್ಯತೆ ಕಡಿಮೆಯಾಗುತ್ತದೆ. ಈ ಎಲ್ಲ ಅಂಶಗಳನ್ನೂ ಪರಿಶೀಲಿಸಬೇಕು. ವ್ಯವಹಾರದ ದೃಷ್ಟಿಯಿಂದಲೂ ಇದನ್ನು ನೋಡಬೇಕಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು.ಅರ್ಜಿದಾರರು ಸೂಚಿಸಿದಂತೆ ತಿಂಗಳಿಗೆ ಮೂರು ಅಥವಾ ನಾಲ್ಕು ದಿನಗಳ ರಜೆ ತೆಗೆದುಕೊಳ್ಳುವ ಕಾನೂನು ರಚಿಸಿದರೆ, ಅದು ಮಹಿಳೆಯರ ವೃತ್ತಿಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಿಜೆಐ ಮೌಖಿಕವಾಗಿ ಅಭಿಪ್ರಾಯಪಟ್ಟರು.

ಉದ್ಯೋಗ ಸ್ಥಳದಲ್ಲಿ ಸೃಷ್ಟಿಯಾಗುವ ಮನಸ್ಥಿತಿಯ ಬಗ್ಗೆ ಅರ್ಜಿದಾರರು ಅರ್ಥಮಾಡಿಕೊಳ್ಳಬೇಕು ಎಂದು ಸಿಜೆಐ ತಿಳಿಸಿದರು. ಆಗ ವಕೀಲರು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಪರಿಗಣಿಸಿ ಖಾಸಗಿ ಕಂಪನಿಗಳು ಸ್ವಯಂಪ್ರೇರಣೆಯಿಂದ ರಜೆ ನೀಡಿವೆ ಎಂದು ವಾದಿಸಿದರು. ಬಳಿಕ ಖಾಸಗಿ ಕಂಪನಿಗಳು ಸ್ವಯಂಪ್ರೇರಣೆಯಿಂದ ರಜೆ ನೀಡುವುದನ್ನು ಸಿಜೆಐ ಶ್ಲಾಘಿಸಿದರು.”ಕಡ್ಡಾಯ ಷರತ್ತು ಕಾನೂನು ಮಾಡಿದ್ರೆ ಮಹಿಳೆಯರ ವೃತ್ತಿಜೀವನಕ್ಕೆ ಎಷ್ಟು ಹಾನಿ ಮಾಡಲಿದ್ದೀರಿ ಎಂಬುದು ನಿಮಗೆ ಗೊತ್ತಿಲ್ಲ. ಆಗ ಯಾರೂ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿತು.

Kishor KV

Leave a Reply

Your email address will not be published. Required fields are marked *