ರಾಜ್ಯದಲ್ಲಿ ಸಿಲಿಂಡರ್ ಕಳ್ಳರ ಹಾವಳಿ – ಕಾಂಪೌಂಡ್‌ನೊಳಗೆ ಇಟ್ಟಿದ್ದ ಸಿಲಿಂಡರ್ ಅಬೇಸ್

ಎಲ್‌ಪಿಜಿ ಕೊರತೆ ನಡುವೆ ರಾಜ್ಯದಲ್ಲಿ ಸಿಲಿಂಡರ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಲವೆಡೆ ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಮನೆ ಕಾಂಪೌಂಡ್‌ನೊಳಗೆ ಇಟ್ಟಿದ್ದ ಸಿಲಿಂಡರ್ ಕಳ್ಳತನ ಮಾಡಿರುವುದು ಕಂಡುಬಂದಿದ್ದು, ಕಳ್ಳರ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಎರಡು ಪ್ರತ್ಯೇಕ ಘಟನೆಗಳ ಪೈಕಿ ಒಂದು ಚನ್ನಪಟ್ಟಣದಲ್ಲಿ ನಡೆದಿದ್ದು, ನಗರದಲ್ಲಿನ ಮನೆಯೊಂದರ ಬಳಿ ಇಟ್ಟಿದ್ದ ಗೃಹ ಬಳಕೆಯ ಸಿಲಿಂಡರ್ ಅನ್ನು ಯುವಕನೊಬ್ಬ ಗೇಟ್ ತೆಗೆದು ಒಳಬಂದು ಹೊತ್ತೊಯ್ದಿದ್ದಾನೆ. ಹಾಡಹಗಲೇ ಯುವಕ ಮನೆ ಆವರಣದಲ್ಲಿ ಸಿಲಿಂಡರ್ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ದೇಶದ ಜನರಿಗೆ ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ! – ಇನ್ಮುಂದೆ ಪಡಿತರ ಅಂಗಡಿಗಳಲ್ಲಿ ಸಿಗಲಿದೆ ಸೀಮೆಎಣ್ಣೆ!
ಮತ್ತೊಂದು ಇಂತಹುದೇ ಪ್ರಕರಣ ಬೆಂಗಳೂರಿನ ಕಲ್ಯಾಣನಗರದಲ್ಲಿ ವರದಿಯಾಗಿದೆ. ರಾತ್ರಿ ವೇಳೆ ಮನೆಯೊಂದರ ಬಳಿ ಬಂದ ವ್ಯಕ್ತಿ, ಸಾಮಾನ್ಯರಂತೆ ಬೈಕ್ ನಿಲ್ಲಿಸುತ್ತಾನೆ. ಬಳಿಕ ಸುತ್ತಮುತ್ತ ಯಾರು ಇಲ್ಲದ್ದನ್ನು ಗಮನಿಸಿ ಚೀಲವೊಂದರಲ್ಲಿ ಸಿಲಿಂಡರ್ ಹಾಕಿಕೊಂಡು ಅಲ್ಲಿಂದ ಪಾರಾರಿಯಾಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಅಡುಗೆ ಮಾಡಲು ಸಮಸ್ಯೆಯಾಗಿದೆ. ದರ ಹೆಚ್ಚಳದಿಂದ ಗ್ರಾಹಕರು ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಗ್ಯಾಸ್ ಖರೀದಿಸುತ್ತಿರುವುದೂ ಕಂಡುಬಂದಿದೆ. ಇದೆಲ್ಲದರ ಮಧ್ಯೆ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ನಿದ್ದೆಗಡಿಸಿದೆ.

ನೋಡಿರಿ

