ಮಂಗಳೂರಲ್ಲಿ ಡ್ರೈಫ್ರೂಟ್ಸ್ ಉದ್ಯಮಕ್ಕೂ ಯುದ್ದದ ಹೊಡೆತ – ರಂಜಾನ್ ಸೀಸನ್‌ನಲ್ಲೂ ವ್ಯಾಪಾರಿಗಳಿಗೆ ನಷ್ಟ..!

ಇಸ್ರೇಲ್-ಇರಾನ್ ಯುದ್ಧದಿಂದ ಮಂಗಳೂರು ಡ್ರೈಫ್ರೂಟ್ಸ್ ಉದ್ಯಮಿಗಳು ಕಂಗಾಲಾಗಿ ಹೋಗಿದ್ದಾರೆ. ಇರಾನ್ ಹಾಗೂ ಅಫ್ಘಾನಿಸ್ತಾನದಿಂದ ಖರ್ಜೂರ ಸೇರಿದಂತೆ ಒಣಹಣ್ಣುಗಳ ಆಮದು ಸ್ಥಗಿತಗೊಂಡಿದ್ದು, ಗೋವಾ, ಆಂಧ್ರ, ಕೇರಳ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಿಗೆ ಪೂರೈಕೆ ಸ್ಥಗಿತಗೊಂಡಿದೆ. ರಂಜಾನ್ ಸೀಸನ್‌ಗೆ ಪೂರೈಕೆ ಕೊರತೆಯಾಗಿರುವುದರಿಂದ ವ್ಯಾಪಾರಿಗಳು ತೀವ್ರ ನಷ್ಟದಿಂದ ಕಂಗೆಟ್ಟಿದ್ದಾರೆ.
ಇದನ್ನೂಓದಿ:ಹೋಟೆಲ್‌ನಲ್ಲಿ ತಿಂಡಿ ತಿಂದವರಿಗೆ ಶಾಕ್! – ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕವನ್ನೂ ನೀಡಿದ ರೆಸ್ಟೋರೆಂಟ್!
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ಡ್ರೈಫ್ರೂಟ್ಸ್ ಉದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಬೇಕಿದ್ದ ಖರ್ಜೂರ ಸೇರಿದಂತೆ ಹಲವು ಒಣಹಣ್ಣುಗಳ ಪೂರೈಕೆ ಸ್ಥಗಿತಗೊಂಡಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಭಾರತದ ಪ್ರಮುಖ ಡ್ರೈಫ್ರೂಟ್ಸ್ ಆಮದು ಸಂಸ್ಥೆಯಾದ ‘ರೀಮ್ ಟ್ರೇಡರ್ಸ್’ ಸೇರಿದಂತೆ ಹಲವು ವ್ಯಾಪಾರಿಗಳು ಈಗ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕಂಪನಿ ಮಂಗಳೂರಿನಿಂದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾ ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಡ್ರೈಫ್ರೂಟ್ಸ್ ಪೂರೈಸುತ್ತದೆ. ಕರ್ನಾಟಕದ ವಿವಿಧ ಕಡೆಗಳಿಗೂ ಇಲ್ಲಿಂದಲೇ ಡ್ರೈಫ್ರೂಟ್ಸ್ ಪೂರೈಕೆಯಾಗುತ್ತಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್ ಆಮದು ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಖರ್ಜೂರ ಸೇರಿದಂತೆ ಅಂಜೂರ, ಅಪ್ರಿಕಾಟ್, ಬಾದಾಮ್, ಕಪ್ಪು ದ್ರಾಕ್ಷಿ, ಫೈನ್ ನಟ್ಸ್ ಸೇರಿದಂತೆ ಹಲವು ಒಣಹಣ್ಣುಗಳ ಬೆಲೆಗಳು ಶೇ 15 ರಿಂದ 20 ರವರೆಗೆ ಏರಿಕೆ ಕಂಡಿವೆ. ಸಾಮಾನ್ಯವಾಗಿ ಭಾರತಕ್ಕೆ ಆಮದು ಆಗುವ ಖರ್ಜೂರಗಳಲ್ಲಿ ಸುಮಾರು 60 ಶೇಕಡಾ ಪ್ರಮಾಣ ಇರಾನ್‌ನಿಂದಲೇ ಬರುತ್ತದೆ. ಆದರೆ ಇತ್ತೀಚಿನ ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್‌ನಿಂದ ಬರುತ್ತಿದ್ದ ದೊಡ್ಡ ಪ್ರಮಾಣದ ಖರ್ಜೂರ ಪೂರೈಕೆ ಅಡಚಣೆಗೆ ಒಳಗಾಗಿದೆ. ಇದಕ್ಕೂ ಮೊದಲು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್‌ಗಳನ್ನು ಪಾಕಿಸ್ತಾನದ ವಾಘಾ ಗಡಿ ಮಾರ್ಗದ ಮೂಲಕ ರಸ್ತೆ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪಾಕಿಸ್ತಾನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಆ ಮಾರ್ಗದಲ್ಲಿಯೂ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಫ್ಘಾನಿಸ್ತಾನದಿಂದ ಬರಬೇಕಾದ ಸರಕುಗಳನ್ನು ಈಗ ಸಮುದ್ರ ಮಾರ್ಗದ ಮೂಲಕ ಇರಾನ್‌ನ ಬಂದರ್ ಅಬ್ಬಾಸ್ ಬಂದರು ತಲುಪಿ, ಅಲ್ಲಿಂದ ಭಾರತಕ್ಕೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾಗಾಟ ಸಮಯವೂ ಹೆಚ್ಚಾಗಿ, ವೆಚ್ಚವೂ ಹೆಚ್ಚಾಗಿದೆ. ರಂಜಾನ್ ಸೀಸನ್ ಹಿನ್ನೆಲೆಯಲ್ಲಿ ಖರ್ಜೂರಕ್ಕೆ ಹೆಚ್ಚಾದ ಬೇಡಿಕೆ ಇರುತ್ತದೆ. ಆದರೆ ಈ ವೇಳೆಯಲ್ಲೇ ಪೂರೈಕೆ ಕಡಿಮೆಯಾಗಿದೆ.

ನೋಡಿರಿ

