ಪೊಲೀಸ್‌ ಇನ್‌ಸ್ಪೆಕ್ಟರ್‌ ವೇಷದಲ್ಲಿ ಬಂದು ಹಣ, ಚಿನ್ನ ಕದ್ದ! –   ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?  

ಪೊಲೀಸ್‌ ಇನ್‌ಸ್ಪೆಕ್ಟರ್‌ ವೇಷದಲ್ಲಿ ಬಂದು ಹಣ, ಚಿನ್ನ ಕದ್ದ! –   ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?  

ಈಗಿನ ಕಾಲದಲ್ಲಿ ಯಾರನ್ನೂ ನಂಬೋ ಹಾಗಿಲ್ಲ. ಸ್ನೇಹಿತರು ಅಂತ ಅಂದುಕೊಂಡಿದ್ದವರೇ ಹಣದ ಆಸೆಗಾಗಿ ಏನು ಬೇಕಾದ್ರೂ ಮಾಡಲು ರೆಡಿ ಇರುತ್ತಾರೆ. ಇದೀಗ ಇಲ್ಲೊಂದು ಕಡೆ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವೇಷದಲ್ಲಿ ಬಂದು ಮನೆಯವರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ನಾಲ್ವರು ಖದೀಮರು ಅರೆಸ್ಟ್‌ ಆಗಿದ್ದಾರೆ. ತನಿಖೆ ವೇಳೆ ದರೋಡೆಯ ಹಿಂದೆ ಆಪ್ತ ಸ್ನೇಹಿತನೇ ಸಂಚು ಹೂಡಿ ಫಿಟ್ಟಿಂಗ್‌ ಇಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ:  ಕರ್ನಾಟಕದ ಈ ನಗರಗಳಲ್ಲಿ ಉಸಿರಾಡುವುದೇ ಕಷ್ಟ! – ದಿನೇ ದಿನೆ ಕಳಪೆಯಾಗುತ್ತಿದೆ ವಾಯುಗುಣಮಟ್ಟ!

ಈ ಘಟನೆ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಂಬಾಳೆಗೌಡ ದರೋಡೆಗೊಳಗಾದ ಸಂತ್ರಸ್ತ. ಈತನ ಆಪ್ತ ಸ್ನೇಹಿತ ಬೆಟ್ಟೇಗೌಡನ ಪ್ರಕರಣದಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ.

ಏನಿದು ಘಟನೆ? 

ಹೊಂಬಾಳೆಗೌಡರು ಇತ್ತೀಚೆಗಷ್ಟೇ ಸೈಟ್ ಮಾರಾಟ ಮಾಡಿ ಮನೆಯಲ್ಲಿ ದೊಡ್ಡ ಮೊತ್ತದ ಹಣ ಇಟ್ಟಿದ್ದನ್ನು ಗಮನಿಸಿದ್ದ ಬೆಟ್ಟೇಗೌಡ, ಅದನ್ನು ಲೂಟಿ ಮಾಡಲು ಸಂಚು ರೂಪಿಸಿದ್ದನು. ದರೋಡೆಗಾಗಿ ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಆರೋಪಿ ನಾಗೇಂದ್ರನನ್ನು ಬಳಸಿಕೊಳ್ಳಲಾಗಿತ್ತು. ನಾಗೇಂದ್ರ ಪಿಎಸ್‌ಐ ಸಮವಸ್ತ್ರ ಧರಿಸಿ ಅಧಿಕಾರಿಯಂತೆ ಮನೆಗೆ ನುಗ್ಗಿದ್ದ. ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದ ಈ ಗ್ಯಾಂಗ್, ಒಟ್ಟು 20 ಲಕ್ಷ ರೂಪಾಯಿ ನಗದು ಮತ್ತು 677 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ಯಾಡರಹಳ್ಳಿ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ದಾಖಲೆಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದರು. ನಾಗೇಂದ್ರ, ಬೆಟ್ಟೇಗೌಡ, ಬಚ್ಚನ್ ಸೇರಿದಂತೆ ನಾಲ್ವರು ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳಿಂದ 10 ಲಕ್ಷ ರೂ. ನಗದು ಮತ್ತು 429 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮುಂದುವರಿದಿದೆ.

Shwetha M

Leave a Reply

Your email address will not be published. Required fields are marked *