ಯು*ದ್ಧದಿಂದ ನಿಂತ LPG ಗ್ಯಾಸ್ ಪೂರೈಕೆ – ಕ್ಲೋಸ್ ಆಗುತ್ತಾ ಬೆಂಗಳೂರಿನ ಹೋಟೆಲ್‌ಗಳು?

ಯು*ದ್ಧದಿಂದ ನಿಂತ LPG ಗ್ಯಾಸ್ ಪೂರೈಕೆ –  ಕ್ಲೋಸ್ ಆಗುತ್ತಾ ಬೆಂಗಳೂರಿನ ಹೋಟೆಲ್‌ಗಳು?

ಇರಾನ್- ಇಸ್ರೇಲ್ ಯುದ್ಧದಿಂದ  ಬೆಂಗಳೂರಿನ ಹೋಟೆಲ್‌ಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯುಂಟಾಗಿದೆ. ಪರಿಣಾಮ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿ ಹೀಗೆ ಮುಂದುವರಿದ್ರೆ ಶೀಘ್ರದಲ್ಲೇ ಹೋಟೆಲ್​ಗಳು ಬಂದ್ ಆಗುವ ಸಾಧ್ಯತೆ ಇದೆ.

ಬೆಂಗಳೂರು ಹೋಟೆಲ್‌ಗಳ ಸಂಘ ಈ ಬಗ್ಗೆ ಮಾಹಿತಿ  ನೀಡಿದ್ದು,   ಬೇಡಿಕೆಗಿಂತ ಕೇವಲ 20% ಸಿಲಿಂಡರ್‌ಗಳನ್ನು ಮಾತ್ರ ಪೂರೈಸಲಾಗಿದೆ. ಪರಿಣಾಮವಾಗಿ, ಬೆಂಗಳೂರಿನ ಹೆಚ್ಚಿನ ಹೋಟೆಲ್‌ಗಳು ಎಂದಿನಂತೆ ವ್ಯವಹಾರ ಮಾಡಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ನಾವು ಎಲ್ಲಾ ಹೋಟೆಲ್‌ಗಳನ್ನು ಮುಚ್ಚಬೇಕಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ನಾಳೆಯಿಂದ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮುಷ್ಕರ – ರೋಗಿಗಳಿಗೆ ಸಂಕಷ್ಟ 

ಇನ್ನು ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ನಿಂತುಹೋಗಿದ್ದು, ಹೋಟೆಲ್‌ಗಳ ದೈನಂದಿನ ಕಾರ್ಯಚಟುವಟಿಕೆಗೆ ತೀವ್ರ ತೊಂದರೆಯಾಗಿದೆ. ಕಳೆದ ಶನಿವಾರವಷ್ಟೇ ಗೃಹಬಳಕೆಯ ಸಿಲಿಂಡರ್ ಬೆಲೆ 60 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ 115 ರೂ. ಏರಿಕೆಯಾಗಿತ್ತು. ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಇಂಧನ ಪೂರೈಕೆ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಹೋಟೆಲ್‌ಗಳು ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರಿಂದ, ಆಹಾರಕ್ಕಾಗಿ ಹೋಟೆಲ್‌ಗಳನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ವೃತ್ತಿಪರರಿಗೆ ಇದರಿಂದ ಸಮಸ್ಯೆಯಾಗಲಿದೆ.

ಈ ಸಮಸ್ಯೆ ಕುರಿತು ಕೇಂದ್ರ ಸಚಿವರು ಮತ್ತು ಸಂಸದರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಸಂಘ ತಿಳಿಸಿದೆ. ಗ್ಯಾಸ್ ಇಲ್ಲದೆ ಹೋಟೆಲ್‌ಗಳಲ್ಲಿ ಆಹಾರ ಒದಗಿಸುವುದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮೊದಲು ತೈಲ ಕಂಪನಿಗಳು 70 ದಿನಗಳವರೆಗೆ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಇರಲ್ಲ ಎಂದು ಭರವಸೆ ನೀಡಿದ್ದವು. ಆದರೆ ಹಠಾತ್ ಸರಬರಾಜು ನಿಲ್ಲಿಸಿರುವುದು ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ.

Kishor KV