ಸಿನಿಮಾ ಪ್ರಮೋಷನ್‌ಗಾಗಿ ಲಾಂಗ್’ ಝಳಪಿಸಿದ ನಟ – ಚೀಪ್‌ ಗಿಮಿಕ್‌ ಮಾಡಲು ಹೋದ ಸ್ಟಾರ್‌ ವಿರುದ್ಧ ಎಫ್‌ಐಆರ್..!

ಸಿನಿಮಾ ಪ್ರಮೋಷನ್‌ಗಾಗಿ ಲಾಂಗ್’ ಝಳಪಿಸಿದ ನಟ – ಚೀಪ್‌ ಗಿಮಿಕ್‌ ಮಾಡಲು ಹೋದ ಸ್ಟಾರ್‌ ವಿರುದ್ಧ ಎಫ್‌ಐಆರ್..!

ಹಿಂದೆಲ್ಲಾ ರಸ್ತೆ ಬದಿಯಲ್ಲಿ, ಬಸ್‌ಗಳಲ್ಲಿ, ಬಸ್‌ ನಿಲ್ಧಾಣಗಳಲ್ಲಿ ಪೋಸ್ಟರ್‌ ಅಂಟಿಸಿ, ಸಿನಿಮಾ ಪ್ರಚಾರ ಮಾಡಲಾಗ್ತಿತ್ತು. ಆದ್ರೀಗ ಕಾಲ ಬದಲಾಗುತ್ತಿದ್ದಂತೆ ಸಿನಿಮಾ ಪ್ರಚಾರದ ಶೈಲಿ ಕೂಡ ಬದಲಾಗಿದೆ. ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡಗಳು ನಾನಾ ರೀತಿಯ ಕಸರತ್ತು, ಗಿಮಿಕ್‌ಗಳಿಗೆ ಮೊರೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದೀಗ ಇಲ್ಲೊಬ್ಬ ನಟ ಪಬ್ಲಿಸಿಟಿಗಾಗಿ ಥಿಯೇಟರ್ ಮುಂದೆ ಮಾರಕಾಸ್ತ್ರ ಹಿಡಿದು ನಿಂತು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಟಾರ್ ಎಂಬ ಸಿನಿಮಾದ ನಾಯಕ ನಟ ಶರತ್ ಪ್ರಕಾಶ್ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಸತ್ತ ವ್ಯಕ್ತಿಗೆ ಮತ್ತೆ ಜೀವ ನೀಡಿದ ರೋಡ್‌ ಹಂಪ್‌! –  ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ನಡೆದಿದ್ದೇನು?

ಹೊಸದಾಗಿ ಬಿಡುಗಡೆಯಾಗಿರುವ ‘ಸ್ಟಾರ್’ ಚಿತ್ರದ ಪ್ರಮೋಷನ್‌ಗಾಗಿ ನಾಯಕ ನಟ ಶರತ್ ಪ್ರಕಾಶ್, ಬೆಂಗಳೂರಿನ ಚಂದ್ರೋದಯ ಥಿಯೇಟರ್ ಮುಂದೆ ಮಾರಕಾಸ್ತ್ರ ಹಿಡಿದು ಪೋಸ್ ಕೊಟ್ಟಿದ್ದರು. ಸಾರ್ವಜನಿಕರು ಹಾಗೂ ಪ್ರೇಕ್ಷಕರ ಎದುರೇ ಲಾಂಗ್ ಹಿಡಿದು ನಿಂತು ಸಿನಿಮಾ ಪ್ರಚಾರ ಮಾಡಲು ಹೋಗಿ ಇದೀಗ ಎಡವಟ್ಟಿಗೆ ಸಿಲುಕಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ಜನರಲ್ಲಿ ಭಯ ಮತ್ತು ಆತಂಕ ಸೃಷ್ಟಿಸಿದ ಆರೋಪದ ಮೇಲೆ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ನಟ ಶರತ್ ಪ್ರಕಾಶ್ ವಿರುದ್ಧ ಆಯುಧ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬೀದಿಯಲ್ಲಿ ಮಾರಕಾಸ್ತ್ರ ಹಿಡಿದು ಪ್ರಚಾರ ಮಾಡಲು ನಟನ ಜೊತೆಗೆ ಥಿಯೇಟರ್‌ನವರೂ ಕೂಡ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ನಟ ಶರತ್ ಪ್ರಕಾಶ್ ಜೊತೆಗೆ ಚಂದ್ರೋದಯ ಥಿಯೇಟರ್ ಮಾಲೀಕನ ಮೇಲೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿನಿರಂಗದವರು ಕಾನೂನು ಮತ್ತು ಸುವ್ಯವಸ್ಥೆಯನ್ನು ತೀರಾ ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಯಾವುದೇ ಸಿನಿಮಾ ಬಿಡುಗಡೆಯಾದರೂ ಪ್ರೇಕ್ಷಕರ ಗಮನ ಸೆಳೆಯಲು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಇಂತಹ ಅಗ್ಗದ ಗಿಮಿಕ್‌ಗಳ ಮೊರೆ ಹೋಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Shwetha M