ಶಿಕ್ಷಣಕ್ಷೇತ್ರಕ್ಕೆ ಒತ್ತು ಕೊಟ್ಟ ಸರ್ಕಾರ – ಮಹಿಳಾ ಕಲ್ಯಾಣಕ್ಕೆ ಮಹತ್ವ ನೀಡಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್ನಲ್ಲಿ ಶಿಕ್ಷಣ ಮತ್ತು ಮಹಿಳಾ ಕಲ್ಯಾಣಕ್ಕೆ ಮಹತ್ವ ನೀಡಿದ್ದಾರೆ. ಕೃಷಿ, ನೀರಾವರಿ ಹಾಗೂ ಮೂಲಸೌಕರ್ಯಗಳಿಗೂ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಹರಿದುಬಂದಿದೆ.
ಈ ಬಾರಿಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಂಹಪಾಲು ಸಿಕ್ಕಿದೆ. ಬರೋಬ್ಬರಿ 47,224 ಕೋಟಿ ರೂಪಾಯಿಗಳನ್ನು ಕೇವಲ ಶಿಕ್ಷಣ ಕ್ಷೇತ್ರಕ್ಕಾಗಿ ಎತ್ತಿಡಲಾಗಿದೆ. ಶಾಲೆಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಪ್ರಾಮುಖ್ಯತೆ ನೀಡಿದೆ. ಇದರ ಜೊತೆಗೆ ಗೃಹಲಕ್ಷ್ಮಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬರೋಬ್ಬರಿ 34,929 ಕೋಟಿ ರೂ. ಮೀಸಲಿಟ್ಟು, ನಾರಿಯರ ಸಬಲೀಕರಣಕ್ಕೆ ಸರ್ಕಾರ ದೊಡ್ಡ ಮಟ್ಟದ ಆರ್ಥಿಕ ಶಕ್ತಿಯನ್ನು ತುಂಬಿದೆ. ಗ್ರಾಮೀಣ ಭಾಗದ ಚಿತ್ರಣವನ್ನೇ ಬದಲಾಯಿಸಲು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಗೆ 26,559 ಕೋಟಿ ರೂ. ನೀಡಲಾಗಿದೆ. ಹಾಗೆಯೇ, ಜನರಿಗೆ ಕರೆಂಟ್ ಕಟ್ ಆಗದಂತೆ ನೋಡಿಕೊಳ್ಳಲು ಹಾಗೂ ಗೃಹಜ್ಯೋತಿ ಯೋಜನೆಗೆ ಬಲ ತುಂಬಲು ಇಂಧನ ಇಲಾಖೆಗೆ 29,947 ಕೋಟಿ ರೂ. ಒದಗಿಸಲಾಗಿದೆ. ಇನ್ನು ಅನ್ನದಾತರ ಜೀವನಾಡಿಯಾದ ನೀರಾವರಿ ಯೋಜನೆಗಳ ಕಂಪ್ಲೀಟ್ ಅಭಿವೃದ್ಧಿಗಾಗಿ 22,436 ಕೋಟಿ ರೂಪಾಯಿಗಳ ಬೃಹತ್ ಫಂಡ್ ಬಿಡುಗಡೆ ಮಾಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಪ್ರಯತ್ನ ಮಾಡಲಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಒಳಾಡಳಿತ ಹಾಗೂ ಬಂದರು ಇಲಾಖೆಗೆ 23,100 ಕೋಟಿ ರೂ.ಗಳನ್ನು ನೀಡಲಾಗಿದೆ. ಸಿಟಿಗಳ ಡೆವಲಪ್ಮೆಂಟ್ ಹಾಗೂ ಬಡವರ ಸೂರಿಗಾಗಿ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 22,203 ಕೋಟಿ ರೂ. ಮೀಸಲಿಡಲಾಗಿದೆ. ಜನರ ಕೆಲಸಗಳು ಸುಲಭವಾಗಿ, ಪಾರದರ್ಶಕವಾಗಿ ಆಗಲಿ ಅಂತ ಕಂದಾಯ ಇಲಾಖೆಗೆ 19,845 ಕೋಟಿ ರೂ. ನೀಡಿದ್ದು, ಸಮಾಜ ಕಲ್ಯಾಣ ಇಲಾಖೆಗೂ 18,612 ಕೋಟಿ ರೂ.ಗಳ ಭರ್ಜರಿ ಆರ್ಥಿಕ ಕೊಡುಗೆ ಸಿಕ್ಕಿದೆ. ಜನರ ಆರೋಗ್ಯವೇ ಮಹಾಭಾಗ್ಯ ಅನ್ನೋ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17,818 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹೊಸ ರಸ್ತೆಗಳ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ 11,424 ಕೋಟಿ ರೂ. ನೀಡಲಾಗಿದೆ. ರೈತರ ಬೆನ್ನೆಲುಬಾಗಿರುವ ಕೃಷಿ ಮತ್ತು ತೋಟಗಾರಿಕೆಗೆ 8,373 ಕೋಟಿ ರೂ., ಅನ್ನಭಾಗ್ಯ ಸೇರಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 7,942 ಕೋಟಿ ರೂ., ಹಾಗೂ ಪಶುಸಂಗೋಪನೆಗೆ 4,084 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. ಇವೆಲ್ಲದರ ಜೊತೆಗೆ ಆಡಳಿತ ಯಂತ್ರದ ಇತರೆ ವೆಚ್ಚಗಳಿಗಾಗಿ 1,72,757 ಕೋಟಿ ರೂ.ಗಳನ್ನು ಈ ಆಯವ್ಯಯದಲ್ಲಿ ಲೆಕ್ಕಹಾಕಲಾಗಿದೆ.

ನೋಡಿರಿ

