ಕುಕ್ಕೆ, ಕೊಲ್ಲೂರು ದೇವಸ್ಥಾನಗಳಿಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ – ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಭಕ್ತರಿಗೆ ಸಿದ್ದು ಉಡುಗೊರೆ

ರಾಜ್ಯದ ಅತಿ ದೊಡ್ಡ ಹಾಗೂ ಶ್ರೀಮಂತ ಮುಜರಾಯಿ ದೇವಸ್ಥಾನಗಳಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಗಳು ಸೇರಿವೆ. ಈ ದೇವಸ್ಥಾನಗಳಿಗೆ ತೆರಳುವ ಭಕ್ತರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಉಡುಗೊರೆ ನೀಡಿದ್ದಾರೆ. ಜೊತೆಗೆ ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಸಿದ್ದು ಬಜೆಟ್‌ನಲ್ಲಿ ಬಂಪರ್ ಕೊಡುಗೆ ಸಿಕ್ಕಿದೆ.
ಇದನ್ನೂ ಓದಿ:ಮದ್ಯ ಪ್ರಿಯರಿಗೆ ಸಿದ್ದರಾಮಯ್ಯ ಬಜೆಟ್ ಶಾಕ್ – ಅರಣ್ಯ ಇಲಾಖೆಯಲ್ಲಿ 2000 ಹುದ್ದೆಗಳ ನೇಮಕಾತಿ
ಹಿಂದೂ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳ ಅಭಿವೃದ್ಧಿಗೆ ಹಾಗೂ ಭಕ್ತರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಈ ಎರಡೂ ಮಹತ್ವದ ಕ್ಷೇತ್ರಗಳಲ್ಲಿ ಭಕ್ತರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಪ್ರತ್ಯೇಕ ‘ಅಭಿವೃದ್ಧಿ ಪ್ರಾಧಿಕಾರ’ಗಳನ್ನು ರಚಿಸಲು ಸರ್ಕಾರ ಉದ್ದೇಶಿಸಿದೆ.
ಹೊರ ರಾಜ್ಯದ ಪುಣ್ಯಕ್ಷೇತ್ರಗಳಿಗೆ ಹೋಗುವ ಕನ್ನಡಿಗರಿಗೆ ಉಳಿದುಕೊಳ್ಳಲು ಕಷ್ಟವಾಗಬಾರದು ಅಂತ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ವಾರಣಾಸಿಯಲ್ಲಿ (ಕಾಶಿ) ಸದ್ಯ ಇರುವ ಛತ್ರ ಶಿಥಿಲಗೊಂಡಿರುವುದರಿಂದ ಅಲ್ಲಿ ಹೊಸದಾಗಿ ರಾಜ್ಯ ಛತ್ರ ನಿರ್ಮಾಣವಾಗಲಿದೆ. ಹಾಗೆಯೇ, ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಸೇರಿದ ಜಾಗದಲ್ಲಿರುವ ಛತ್ರದ ನವೀಕರಣ, ಶ್ರೀಶೈಲಂ ಕ್ಷೇತ್ರದಲ್ಲಿ ಹೊಸದಾಗಿ ಯಾತ್ರಿನಿವಾಸ ನಿರ್ಮಾಣ ಹಾಗೂ ಮಹಾರಾಷ್ಟ್ರದ ತುಳಜಾಪುರದಲ್ಲೂ ಪ್ರಸ್ತುತ ಇರುವ ಛತ್ರದ ಜಾಗದಲ್ಲಿ ಹೊಚ್ಚಹೊಸ ಛತ್ರವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ.
ಕರ್ನಾಟಕದಿಂದ ಜಮ್ಮು-ಕಾಶ್ಮೀರದ ಜಗನ್ಮಾತೆ ‘ಶ್ರೀ ಮಾತಾ ವೈಷ್ಣೋದೇವಿ’ ದೇವಸ್ಥಾನಕ್ಕೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ಕೊಟ್ಟಿದೆ. ಈ ಪುಣ್ಯಕ್ಷೇತ್ರಕ್ಕೆ ಹೋಗುವ ಪ್ರತಿ ಯಾತ್ರಾರ್ಥಿಗೆ ಸರ್ಕಾರದಿಂದ ತಲಾ 5,000 ರೂಪಾಯಿಗಳ ಸಹಾಯಧನವನ್ನು ಡಿ.ಬಿ.ಟಿ (DBT) ಮೂಲಕ ವಿತರಿಸಲು ಉದ್ದೇಶಿಸಲಾಗಿದೆ. ಬರೀ ಇದಕ್ಕಾಗಿಯೇ ಬಜೆಟ್‌ನಲ್ಲಿ 5 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಮೀಸಲಿಡಲಾಗಿದೆ.

ನೋಡಿರಿ

