ಇಂಗ್ಲೆಂಡ್ ವಿರೋಧ ರೋಚನ ಸೆಮಿಫೈನಲ್ ಪಂದ್ಯ ಗೆದ್ದ ಟೀಂ ಇಂಡಿಯಾ

ಇಂಗ್ಲೆಂಡ್ ವಿರೋಧ ರೋಚನ ಸೆಮಿಫೈನಲ್ ಪಂದ್ಯ ಗೆದ್ದ ಟೀಂ ಇಂಡಿಯಾ

ಕೊನೆಯ ಓವರ್‌ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌  ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ  ಭಾರತ ತಂಡ, ಎದುರಾಳಿ ಇಂಗ್ಲೆಂಡ್‌ ವಿರುದ್ಧ 7 ರನ್‌ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನಿಂದ ಟೀಮ್‌ ಇಂಡಿಯಾ ಸತತ ಎರಡನೇ ಬಾರಿ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿತು. ಇದರ ಶ್ರೇಯ ಸಂಜು ಸ್ಯಾಮ್ಸನ್‌ಗೆ ಸಲ್ಲಬೇಕು. ಏಕೆಂದರೆ ಅವರು ಕೇವಲ 42 ಎಸೆತಗಳಲ್ಲಿ 89 ರನ್‌ ಗಳನ್ನು ಸಿಡಿಸಿದ್ದರು. ಇದರ ಫಲವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಜಾಕೋಬ್‌ ಬೆಥೆಲ್‌ ಅವರ ಹೋರಾಟದ ಶತಕದ ಹೊರತಾಗಿಯೂ ಇಂಗ್ಲೆಂಡ್‌ ತಂಡ ಕೂದಲೆಳೆಯ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿತು.

ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 254 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ, ಜಾಕೋಬ್‌ ಬೆಥೆಲ್‌ ಅವರ ದಾಖಲೆಯ ಶತಕದ ಬಲದಿಂದ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿತ್ತು. ಆದರೆ, ಡೆತ್‌ ಓವರ್‌ಗಳಲ್ಲಿ ಭಾರತದ ಬೌಲರ್‌ಗಳ ರಣತಂತ್ರವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಇಂಗ್ಲೆಂಡ್‌, ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 7 ವಿಕೆಟ್‌ಗಳ ನಷ್ಟಕ್ಕೆ 246 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 7 ರನ್‌ಗಳಿಂದ ಸೋತ ಇಂಗ್ಲೆಂಡ್‌ ತಂಡದ ಟಿ20 ವಿಶ್ವಕಪ್‌ ಕನಸು ಭಗ್ನವಾಯಿತು.

ಇದನ್ನೂ ಓದಿ: ಅಮೆಜಾನ್ ಕಾಡಿನಲ್ಲಿ ಇದ್ದಾರೆ ಬುಡಕಟ್ಟು ಜನ – ಹೊರ ಜಗತ್ತಿನ ಬಗ್ಗೆ ಇವರಿಗೆ ಭಯ ಯಾಕೆ?

ಇಂಗ್ಲೆಂಡ್‌ ಪರ ಮೂರು ಮಂದಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಫಿಲ್‌ ಸಾಲ್ಟ್‌, ಜೋಸ್‌ ಬಟ್ಲರ್‌(25 ರನ್‌) ಹಾಗೂ ಹ್ಯಾರಿ ಬ್ರೂಕ್‌ ಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜಾಕೋಬ್‌ ಬೆಥೆಲ್‌, ಕೊನೆಯ ಓವರ್‌ವರೆಗೂ ಏಕಾಂಗಿ ಹೋರಾಟ ನಡೆಸಿ 48 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 105 ರನ್‌ ಗಳಿಸಿ ದಾಖಲೆಯ ಶತಕವನ್ನು ಸಿಡಿಸಿದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಬಹುತೇಕ ಗೆಲುವಿನ ಸನಿಹ ತಂದಿದ್ದರು. ಆದರೆ, ಕೊನೆಯ ಹಂತದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದರಿಂದ ಆಂಗ್ಲರು ಸೋಲು ಒಪ್ಪಬೇಕಾಯಿತು. ಜಾಕೋಬ್‌ ಬೆಥೆಲ್‌ಗೆ ಕೆಲ ಕಾಲ ಸಾಥ್‌ ನೀಡಿದ್ದ ವಿಲ್‌ ಜ್ಯಾಕ್ಸ್‌ 20 ಎಸೆತಗಳಲ್ಲಿ 35 ರನ್‌ ಗಳಿಸಿದ್ದರು. ಆದರೆ, ಅವರನ್ನು ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲು ಅರ್ಷದೀಪ್‌ ಸಿಂಗ್‌ ಬಿಡಲಿಲ್ಲ.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಸಂಜು ಸ್ಯಾಮ್ಸನ್‌ (89 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 253 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 254 ರನ್‌ಗಳ ದಾಖಲೆಯ ಗುರಿಯನ್ನು ನೀಡಿದೆ. ಸಂಜು ಜೊತೆಗೆ ಇಶಾನ್‌ ಕಿಶನ್‌ (39 ರನ್)‌, ಶಿವಂ ದುಬೆ (43 ರನ್‌), ತಿಲಕ್‌ ವರ್ಮಾ (21 ರನ್‌) ಹಾಗೂ ಹಾರ್ದಿಕ್‌ ಪಾಂಡ್ಯ(27 ರನ್‌) ಅವರು ಕೂಡ ಸಿಕ್ಕ ಅವಕಾಶದಲ್ಲಿ ರನ್‌ ಗಳಿಸಿದರು.ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾ 7 ಎಸೆತಗಳಲ್ಲಿ 9 ರನ್‌ ಗಳಿಸಿದ ಬಳಿಕ ವಿಲ್‌ ಜ್ಯಾಕ್ಸ್‌ಗೆ ಎರಡನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ತಂಡದ ಜವಾಬ್ದಾರಿ ತೆಗೆದುಕೊಂಡ ಮತ್ತೊಬ್ಬ ಆರಂಭಿಕ ಸಂಜು ಸ್ಯಾಮ್ಸನ್‌ ಕಳೆದ ಪಂದ್ಯದಲ್ಲಿ ಸಿಡಿಸಿದ್ದ ಶತಕದ ಫಾರ್ಮ್‌ ಅನ್ನು ಇಲ್ಲಿ ಮುಂದುವರಿಸಿದರು. ಇಂಗ್ಲೆಂಡ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಸಂಜು, ಕೇವಲ 42 ಎಸೆತಗಳಲ್ಲಿ ಬರೋಬ್ಬರಿ 7 ಸಿಕ್ಸರ್‌ ಹಾಗೂ 8 ಬೌಂಡರಿಗಳ ಮೂಲಕ 89 ರನ್‌ ಸಿಡಿಸಿದರು. ಇದರಲ್ಲಿ ಅವರು 211ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿದ್ದು ವಿಶೇಷ. ಅಲ್ಲದೆ 18 ಎಸೆತಗಳಲ್ಲಿ 39 ರನ್‌ ಸಿಡಿಸಿದ ಇಶಾನ್‌ ಕಿಶನ್‌ ಜೊತೆಗೆ ಸಂಜು 45 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ಹಾಗೂ ಶಿವಂ ದುಬೆ ಅವರೊಂದಿಗೆ 43 ರನ್‌ಗಳ ಅಲ್ಪ ಜೊತೆಯಾಟವನ್ನು ಆಡಿದರು. ಇದರೊಂದಿಗೆ ಭಾರತ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿ ಶತಕದಂಚಿನಲ್ಲಿ ವಿಲ್‌ ಜ್ಯಾಕ್ಸ್‌ಗೆ ವಿಕೆಟ್‌ ಒಪ್ಪಿಸಿದರು.

Kishor KV

Leave a Reply

Your email address will not be published. Required fields are marked *