ಎಕ್ಸಾಂಗೆ ಹೋದಾಗ ಹೊಟ್ಟೆ ನೋವು – ಆಸ್ಪತ್ರೆಗೆ ಹೋದ ತಕ್ಷಣ 16 ವರ್ಷದ ವಿದ್ಯಾರ್ಥಿನಿಗೆ ಹೆರಿಗೆ

ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ತೆಲಂಗಾಣದ ನಾಗರ್ಕರ್ನೂಲ್‌ನಲ್ಲಿ ನಡೆದಿದೆ. ಬಾಲಕಿಯರ ವಸತಿ ಶಾಲೆಯ ಪ್ರಥಮ ವರ್ಷದ ಮಧ್ಯಂತರ ವಿದ್ಯಾರ್ಥಿನಿಯಾಗಿರುವ 16 ವರ್ಷದ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾದ ಕೆಲವು ಗಂಟೆಗಳ ಬಳಿಕ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಸೋಮವಾರ ಪರೀಕ್ಷೆ ಹಾಜರಾಗಿದ್ದು, ಬಳಿಕ ಹೊಟ್ಟೆ ನೋವು ಎಂದು ದೂರು ನೀಡಿದ್ದಳು. ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.
ಇದನ್ನೂ ಓದಿ: ಸಂಜು ವಿರುದ್ಧ BAN ಟ್ರೆಂಡ್ – ENG ವಿರುದ್ಧ ಆಡಲ್ವಾ ಚೇಟಾ?
16 ವರ್ಷದ ವಿದ್ಯಾರ್ಥಿನಿಗೆ ಸೋಮವಾರ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ತಾಯಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಸ್ಕ್ಯಾನ್ ಮಾಡಿಸಲು ಸಲಹೆ ನೀಡಿದ್ದು, ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದ್ದರು. ಅಲ್ಲೇ ಬಾಲಕಿ ತನ್ನ ಸರದಿಗಾಗಿ ಕಾಯುತ್ತಿದ್ದಾಗ ಶೌಚಾಲಯಕ್ಕೆ ಹೋಗಿದ್ದು, ಅಲ್ಲೇ ಅವಳಿಗೆ ಹೆರಿಗೆಯಾಗಿದೆ.
ಸ್ಕ್ಯಾನಿಂಗ್ ಕೇಂದ್ರದ ಸಿಬ್ಬಂದಿ ಶೌಚಾಲಯದೊಳಗೆ ನವಜಾತ ಶಿಶುವನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿ ಮತ್ತು ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಮತ್ತು ಮಗು ಇಬ್ಬರೂ ಸುರಕ್ಷಿತರಾಗಿದ್ದಾರೆ ಮತ್ತು ವೈದ್ಯಕೀಯ ಆರೈಕೆಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಸ್ಕ್ಯಾನಿಂಗ್ ಕೇಂದ್ರದ ಸಿಬ್ಬಂದಿ ನೋಡುವ ಮುನ್ನ ಬಾಲಕಿ ಮತ್ತು ಆಕೆಯ ತಾಯಿ ನವಜಾತ ಶಿಶುವನ್ನು ಶೌಚಾಲಯದೊಳಗಿನ ಕಸದ ಬುಟ್ಟಿಯಲ್ಲಿ ಇಟ್ಟಿದ್ದರು. ಬಾಲಕಿ ಅಪ್ರಾಪ್ತಳಾಗಿರುವುದರಿಂದ ಅವರು ಹೆದರಿ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಬಾಲಕಿ ಹೇಗೆ ಗರ್ಭಿಣಿಯಾದಳು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನೋಡಿರಿ

