ಅಲ್ಲಿ ಯುದ್ಧ.. ಇಲ್ಲಿ ಬೆಲೆ ಏರಿಕೆಯ ಬಿಸಿ – ಅಡುಗೆ ಎಣ್ಣೆ ದರ ದಿಢೀರ್ ಜಾಸ್ತಿ..!

ಅಲ್ಲಿ ಯುದ್ಧ.. ಇಲ್ಲಿ ಬೆಲೆ ಏರಿಕೆಯ ಬಿಸಿ – ಅಡುಗೆ ಎಣ್ಣೆ ದರ ದಿಢೀರ್ ಜಾಸ್ತಿ..!

ಮಧ್ಯಪ್ರಾಚ್ಯದ ದೇಶದಲ್ಲಿ ಯುದ್ಧದ ತೀವ್ರತೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದರ ಪರಿಣಾಮ ಭಾರತಕ್ಕೂ ತಟ್ಟಿದೆ. ಇದೀಗ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಇದನ್ನೂ ಓದಿ: ಬಿಹಾರ ರಾಜಕೀಯದಲ್ಲಿ ಮಹತ್ವದ ತಿರುವು – ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರಾ ನಿತೀಶ್ ಕುಮಾರ್?

ಇರಾನ್​, ಇಸ್ರೇಲ್​ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ಘರ್ಷಣೆಯಿಂದ ಯಾರಿಗೆ ಲಾಭವೋ.. ಏನೋ.. ಆದರೆ, ಭಾರತದ ಮೇಲೆ ಮಾತ್ರ ದರ ಏರಿಕೆಯ ಬರೆ ಬಿದ್ದಿದೆ. ಅಡುಗೆ ಮನೆಗಳಲ್ಲಿ ಬಳಸುವ ಅಡುಗೆ ಎಣ್ಣೆಯ ಬೆಲೆ ದಿಢೀರ್ ಜಾಸ್ತಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಒಂದು ಲೀಟರ್ ಅಡುಗೆ ಎಣ್ಣೆಯ ಮೇಲೆ 4 ರಿಂದ 5 ರೂಪಾಯಿ ಏರಿಕೆಯಾಗಿದೆ. ಮುಂದಿನ ವಾರದಲ್ಲಿ 10 ರಿಂದ 15 ರೂಪಾಯಿ ಹೆಚ್ಚಾಗುವ  ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ತೈಲ ಸರಬರಾಜು ಮಾರ್ಗಗಳು ಅಡಚಣೆಗೊಳಗಾಗಿವೆ. ಭಾರತಕ್ಕೆ ಹೆಚ್ಚಿನ ಅಡುಗೆ ಎಣ್ಣೆ (ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಮುಂತಾದವು) ಉಕ್ರೇನ್, ರಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಯುದ್ಧದ ಕಾರಣದಿಂದ ಸಾಗಣೆ ವೆಚ್ಚ ಹೆಚ್ಚಾಗಿದೆ. ವಿಶೇಷವಾಗಿ ಹರ್ಮಾಜ್​ ಜಲಸಂಧಿ ಮೂಲಕ ಬರುವ ಹಡಗುಗಳಿಗೆ ತೊಂದರೆಯಾಗುತ್ತಿದೆ. ಇರಾನ್ ಸುಮಾರು 100ಕ್ಕೂ ಹೆಚ್ಚು ಹಡಗುಗಳನ್ನು ನಿಲ್ಲಿಸಿದ್ದು, ಇದರಿಂದ ಸರಬರಾಜು ಕಡಿಮೆಯಾಗಿದೆ. ಹಡಗುಗಳು ಬದಲಿ ಮಾರ್ಗವಾದ ಗುಡ್ ಹೋಪ್ ಶಿಖರ ಮೂಲಕ ಬರಬೇಕಾಗಿದ್ದು, ಇದು ಹೆಚ್ಚು ದೂರ ಮತ್ತು ಭಾರೀ ವೆಚ್ಚ ತಗುಲುತ್ತಿದೆ. ಈ ಪರಿಣಾಮವಾಗಿ ಆಮದು ವೆಚ್ಚ ಹೆಚ್ಚಿ, ಭಾರತದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದ ಬೆಲೆ ಏರಿಕೆಯನ್ನು ನೋಡುವುದಾದರೆ, ಗೋಲ್ಡ್ ವಿನ್ನರ್ ಬೆಲೆ ಕಳೆದ ವಾರ 1 ಲೀಟರ್ 161 ರೂಪಾಯಿ ಇದ್ದದ್ದು, ಈ ವಾರ 165 ರೂಪಾಯಿಯಷ್ಟು ಏರಿಕೆ ಕಂಡಿದೆ.  ಸನ್ ಪ್ಯೂರ್  ಬೆಲೆ ಕಳೆದ ವಾರ 161 ರೂಪಾಯಿ, ಈ ವಾರ 165 ರೂಪಾಯಿಗೆ ಏರಿಕೆ ಕಂಡಿದೆ. ಫಾರ್ಚೂನ್ ಆಯಿಲ್ ಬೆಲೆ ಕಳೆದ ವಾರ 152 ರೂಪಾಯಿ, ಈ ವಾರ 157 ರೂಪಾಯಿ ಏರಿಕೆಯಾಗಿದೆ.  ಇತರ ಬ್ರ್ಯಾಂಡ್‌ಗಳಾದ ಸಫೋಲಾ, ಸನ್‌ಡ್ರಾಪ್ ಮುಂತಾದವುಗಳ ಮೇಲೂ ಸರಾಸರಿ 4 ರಿಂದ 5 ರೂಪಾಯಿ ಏರಿಕೆಯಾಗಿದೆ. ಇದು ಕೇವಲ ಒಂದು ವಾರದ ಬದಲಾವಣೆಯಾಗಿದ್ದು, ಯುದ್ಧ ಮುಂದುವರೆದರೆ ಮುಂದಿನ ವಾರದಲ್ಲಿ 10 ರಿಂದ 15 ರೂಪಾಯಿ ಹೆಚ್ಚುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಭಾರತದಲ್ಲಿ ಅಡುಗೆ ಎಣ್ಣೆಯ ಬಳಕೆ ದೈನಂದಿನ ಅಗತ್ಯವಾಗಿದ್ದು, ಇದರ ಏರಿಕೆಯು ಮಧ್ಯಮ ವರ್ಗದ ಕುಟುಂಬಗಳ ಬಜೆಟ್‌ಗೆ ಹೊರೆಯಾಗಿದೆ.

Sulekha

Leave a Reply

Your email address will not be published. Required fields are marked *