ಬಿಹಾರ ರಾಜಕೀಯದಲ್ಲಿ ಮಹತ್ವದ ತಿರುವು – ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರಾ ನಿತೀಶ್ ಕುಮಾರ್?

ಬಿಹಾರದ ರಾಜಕೀಯದಲ್ಲಿ ಮಹತ್ವದ ತಿರುವು ತರಬಹುದಾದ ಬೆಳವಣಿಗೆ ಕಾಣಿಸಿಕೊಂಡಿದೆ. ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ತ ಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಹೊರಬಂದಿದೆ. ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಅವರು ಆಯ್ಕೆಯಾದ ಬಳಿಕ ಮುಖ್ಯಮಂತ್ರಿಪದ ತ್ಯಜಿಸಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಸುದ್ದಿ ಮೂಲಗಳ ಪ್ರಕಾರ, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಗುರುವಾರ ಅವರು ಸಂಸತ್ತಿನ ಮೇಲ್ಮನೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: ಒಂದೇ ಕೊಠಡಿಯಿಂದ 15 ಜನ ಪಾಸ್ ಆಗಿದ್ದು ಹೇಗೆ? – ಕೆಎಎಸ್ ಪರೀಕ್ಷಾ ಫಲಿತಾಂಶದ ಕುರಿತು ಆರೋಪಕ್ಕೆ ಸಿಕ್ತಾ ಉತ್ತರ?
75 ವರ್ಷದ ನಿತೀಶ್ ಕುಮಾರ್ ಈಗಾಗಲೇ ದಾಖಲೆಯಾಗಿ 10 ಬಾರಿ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜಿತನ್ ರಾಮ್ ಮಾಂಝಿ ಸ್ವಲ್ಪಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಹೊರತುಪಡಿಸಿದರೆ, 2015ರಿಂದ ಅವರು ನಿರಂತರವಾಗಿ ರಾಜ್ಯ ರಾಜಕೀಯದಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಎನ್‌ಡಿಎ ಆಗಲಿ ಅಥವಾ ಮಹಾಘಟಬಂಧನ್ ಆಗಲಿ, ಯಾವ ಮೈತ್ರಿಯಲ್ಲಿದ್ದರೂ ಬಿಹಾರದಲ್ಲಿ ಚುನಾವಣಾ ಪ್ರಚಾರದ ಮುಂಚೂಣಿಯಲ್ಲೇ ಅವರು ಕಾಣಿಸಿಕೊಂಡಿದ್ದಾರೆ.
ನಿತೀಶ್ ಕುಮಾರ್ ರಾಜೀನಾಮೆ ನೀಡುವ ಸಾಧ್ಯತೆಯ ಸುದ್ದಿ ಹೊರಬಂದ ಬಳಿಕ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ, ಅವರ ಪುತ್ರ ನಿಶಾಂತ್ ಕುಮಾರ್ ಮುಂದಿನ ರಾಜಕೀಯ ಸಮೀಕರಣದಲ್ಲಿ ಯಾವ ಪಾತ್ರ ವಹಿಸಲಿದ್ದಾರೆ ಎಂಬುದರ ಮೇಲೂ ಕುತೂಹಲ ಹೆಚ್ಚಾಗಿದೆ.

ನೋಡಿರಿ

