ಬಿಸಿ ಗಾಳಿ ಬೀಸುತ್ತಿದೆ ಎಚ್ಚರ – 11 ಗಂಟೆ ನಂತರ ಹೊರಗೆ ಓಡಾಡುವವರಿಗೆ ಕಾದಿದೆ ಅಪಾಯ..!

ಬಿಸಿ ಗಾಳಿ ಬೀಸುತ್ತಿದೆ ಎಚ್ಚರ – 11 ಗಂಟೆ ನಂತರ ಹೊರಗೆ ಓಡಾಡುವವರಿಗೆ ಕಾದಿದೆ ಅಪಾಯ..!

ಕರ್ನಾಟಕದಲ್ಲಿ ಬೇಸಿಗೆ ಬಿಸಿ ತಟ್ಟುತ್ತಿದೆ. ಸೂರ್ಯ ಕೊತ ಕೊತ ಕುದಿಯುತ್ತಿದ್ದಾನೆ ಎಂಬ ಅನುಭವ ಉತ್ತರ ಕರ್ನಾಟಕದಲ್ಲಿ ಈಗಾಗಲೇ ಆಗುತ್ತಿದೆ. ಇನ್ನು ಬೆಂಗಳೂರು ಕೂಡಾ ಇದಕ್ಕೆ ಹೊರತಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ:ಬಿಸಿಲಿಗೆ ಚರ್ಮ ಕಪ್ಪಾಗಿದ್ಯಾ? – ಬೇಸಿಗೆಗಾಲದಲ್ಲಿ ಚರ್ಮದ ರಕ್ಷಣೆ ಹೀಗೆ ಮಾಡಿ!

ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ 38°C-44°C ಅಷ್ಟಿದೆ. ಇದರ ಜೊತೆಗೆ ಬೆಂಗಳೂರಿನ ತಾಪಮಾನ ಕೂಡಾ  30°C-36°C ರಷ್ಟಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಇತ್ತೀಚಿನ ವರದಿಯಂತೆ, ರಾಜ್ಯದಾದ್ಯಂತ ಬೇಸಿಗೆಯ ತೀವ್ರತೆ ಆರಂಭವಾಗಿದೆ. ಜೊತೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿಯೂ ತಾಪಮಾನ ಏರಿಕೆಯಾಗುತ್ತಿದೆ ಎಂಬ ವರದಿಯನ್ನೂ ನೀಡಿದೆ. ರಾಜ್ಯದ ತಾಪಮಾನದ ನಕ್ಷೆಯನ್ನು ಗಮನಿಸಿದರೆ, ಉತ್ತರ ಕರ್ನಾಟಕದ ಜಿಲ್ಲೆಗಳು ಅಕ್ಷರಶಃ ಕೆಂಡದಂತಾಗಿವೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 38°C ನಿಂದ 44°C ವರೆಗೆ ದಾಖಲಾಗುತ್ತಿದ್ದು, ಇದನ್ನು ನಕ್ಷೆಯಲ್ಲಿ ಕೆಂಪು ಬಣ್ಣದಿಂದ ಗುರುತಿಸಲಾಗಿದೆ. ಈ ಭಾಗದಲ್ಲಿ ಬಿಸಿ ಗಾಳಿಯ  ಪ್ರಭಾವ ಹೆಚ್ಚಾಗಿರುತ್ತದೆ. ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಾಪಮಾನವು 30°C ನಿಂದ 36°C ಆಸುಪಾಸಿನಲ್ಲಿದೆ.  ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆ ಉಸಿರುಕಟ್ಟಿದ ವಾತಾವರಣ ಮತ್ತು ಸೆಖೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವಾರಾಂತ್ಯದ ವೇಳೆಗೆ ತಾಪಮಾನದಲ್ಲಿ ಇನ್ನೂ 1-2 ಡಿಗ್ರಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಕರಾವಳಿ ಮತ್ತು ಮಲೆನಾಡಿನ ಕೆಲವು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮೋಡ ಕವಿದ ವಾತಾವರಣ ಕಂಡುಬಂದರೂ, ಅದು ಮಳೆಯಾಗಿ ಪರಿವರ್ತನೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ರಾಜ್ಯದ ದಕ್ಷಿಣ ಭಾಗದಲ್ಲಿ ರಾತ್ರಿಯ ಅವಧಿಯಲ್ಲೂ ಸೆಖೆ ಹೆಚ್ಚಾಗಲಿದೆ. ಮಧ್ಯಾಹ್ನ ತೀವ್ರ ಶಾಖ ಇರುವುದರಿಂದ ಬಿಸಿಗಾಳಿಯ ಹೊಡೆತ ಅಪಾಯಕಾರಿ ಎಂದು ವರದಿ ತಿಳಿಸಿದೆ. ಮಧ್ಯಾಹ್ನ 11:00 ರಿಂದ ಸಂಜೆ 4:00 ರವರೆಗೆ ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

Sulekha

Leave a Reply

Your email address will not be published. Required fields are marked *