ಇಸ್ರೇಲ್‌, ಇರಾನ್‌ ಯುದ್ಧ – ವಿಮಾನ ರದ್ದು, ಸಂಕಷ್ಟದಲ್ಲಿ ಪ್ರಯಾಣಿಕರು

ಇಸ್ರೇಲ್‌, ಇರಾನ್‌ ಯುದ್ಧ – ವಿಮಾನ ರದ್ದು, ಸಂಕಷ್ಟದಲ್ಲಿ ಪ್ರಯಾಣಿಕರು

ಇರಾನ್‌ ಇಸ್ರೇಲ್‌ ನಡುವಿನ ಯುದ್ದ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ. ಎಲ್ಲಂದರಲ್ಲಿ ದಾಳಿ ನಡೆಯುತ್ತಿದೆ. ಇದೀಗ ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯ ಹಿನ್ನೆಲೆ ವಾಯುಪ್ರದೇಶ ನಿರ್ಬಂಧ ಜಾರಿಯಾಗಿದೆ. ಇದೀಗ ಯುದ್ದದ ಬಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ತಟ್ಟಿದೆ. ಇದೀಗ ಸುಮಾರು 40 ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಗೊಂಡಿದ್ದು, ಪರಿಣಾಮ ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಅಂದು ಸಂಜು ಬ್ಯಾಟಿಂಗ್‌ಗೆ ಸೂರ್ಯ ವ್ಯಂಗ್ಯ – ಇಂದು ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ ಸೂರ್ಯ

ಇಂದು ಸಹ ಸರಣಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರಿನಿಂದ ವಿದೇಶಕ್ಕೆ ತೆರಳಬೇಕಿದ್ದ 09 ವಿಮಾನಗಳು ಹಾಗೂ ವಿದೇಶದಿಂದ ಆಗಮಿಸಬೇಕಿದ್ದ 15 ವಿಮಾನಗಳು ಸೇರಿದಂತೆ ಒಟ್ಟು 24 ವಿಮಾನಗಳ ಸಂಚಾರವನ್ನು ಇಂದು ರದ್ದುಗೊಳಿಸಲಾಗಿದೆ. ಅಬುಧಾಬಿ, ಜಿದ್ದಾ, ದೋಹಾ, ದುಬೈ ಮತ್ತು ಬಹ್ರೇನ್‌ ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ ಮತ್ತು ಖತಾರ್ ಏರ್ವೇಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಟಿಕೆಟ್ ಮರು ಬುಕ್ಕಿಂಗ್ ಅಥವಾ ಪೂರ್ಣ ಹಣ ವಾಪಸ್ ಪಡೆಯಲು ಏರ್‌ಲೈನ್ಸ್‌ಗಳು ಅವಕಾಶ ಕಲ್ಪಿಸಿವೆ.

ಇಂದು ಬೆಂಗಳೂರಿಗೆ ಆಗಮಿಸಬೇಕಿದ್ದ 18 ವಿಮಾನಗಳು ಹಾಗೂ ನಿರ್ಗಮಿಸಬೇಕಿದ್ದ 19 ವಿಮಾನಗಳು ರದ್ದಾಗಿದ್ದು, ಪರಿಣಾಮ ಅಬುಧಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ ಮತ್ತು ದೋಹಾ ಕಡೆಗೆ ಪ್ರಯಾಣಿಸುತ್ತಿದ್ದವರಿಗೆ ಭಾರಿ ತೊಂದರೆ ಉಂಟಾಗಿದೆ. ರದ್ದುಗೊಂಡಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ, ವಸತಿ ಸೌಲಭ್ಯ ಅಥವಾ ಪರಿಹಾರ ನೀಡದೇ ವಿಮಾನ ಕಂಪನಿಗಳು ನಿರ್ಲಕ್ಷ್ಯ ತೋರಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಮದುರೈಯಿಂದ ಲಂಡನ್‌ಗೆ ಬೆಂಗಳೂರಿನ ಮೂಲಕ ಪ್ರಯಾಣಿಸುತ್ತಿದ್ದ ದೇವಿ ಕಾಸಿರಾಜನ್ ಅವರು ಮಾತನಾಡಿ, ಡಿಂಡಿಗುಲ್‌ನಿಂದ ತಿರುಚಿಗೆ ಕಾರಿನಲ್ಲಿ ಬಂದು, ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದ ನಂತರವೇ ನಮ್ಮ ವಿಮಾನ ರದ್ದಾಗಿದೆ ಎಂಬುದು ತಿಳಿಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಮಾನ ಕಂಪನಿ ವಾಯುಪ್ರದೇಶ ಮುಚ್ಚಿರುವುದೇ ಕಾರಣ ಎಂದು ಹೇಳಿ ಪರಿಹಾರ ನೀಡಲು ನಿರಾಕರಿಸಿದೆ. “ವಾಯುಪ್ರದೇಶ ತೆರೆಯುತ್ತಿದ್ದಂತೆ ಕಾಲ್ ಸೆಂಟರ್ ಸಂಪರ್ಕಿಸಿ ಮುಂದಿನ ಲಭ್ಯ ವಿಮಾನದಲ್ಲಿ ಅದೇ ದರದಲ್ಲಿ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ. ಆದರೆ, ಅದು ಎರಡು-ಮೂರು ವಾರಗಳ ಬಳಿಕ ಸಿಕ್ಕರೆ ಪ್ರಯೋಜನವೇನು?” ಎಂದು ಪ್ರಶ್ನಿಸಿದ್ದಾರೆ. ಯುಕೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಆದಿತಿ ಗಣಪತಿ ಕೂಡ ವಿಮಾನಯಾನ ಸಂಸ್ಥೆಗಳ ಸಂವಹನದ ಕೊರತೆಯನ್ನು ಪ್ರಶ್ನಿಸಿದ್ದಾರೆ. ಮುಂದಿನ ವೇಳಾಪಟ್ಟಿ ಬಗ್ಗೆ ಕೂಡ ಮಾಹಿತಿಗಳನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Shwetha M

Leave a Reply

Your email address will not be published. Required fields are marked *