ಸಂಜು ಸೂಪರ್ ಡೂಪರ್ ಬ್ಯಾಟಿಂಗ್, ದಾಖಲೆಯ ಚೇಸಿಂಗ್ – ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಎಂಟ್ರಿ

ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತ ಸೆಮಿಫೈನಲ್‌ಗೆ ಎಂಟ್ರಿ ಪಡೆದಿದೆ. ಟೀಮ್ ಇಂಡಿಯಾ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಅದ್ಭುತ ಇನ್ನಿಂಗ್ಸ್ ಮೂಲಕ ಭಾರತ ಸೆಮಿಫೈನಲ್ ಸ್ಥಾನಕ್ಕೇರಿದೆ. ಇನ್ನು ಕೆರಿಬಿಯನ್ನರು ವಿಶ್ವಕಪ್ ಟೂರ್ನಿಯಿಂದ ಹೊರನಡೆದಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಭಾರವಾದ ನಂ.3 ಬ್ಯಾಟರ್ – 18 ತಿಂಗಳಲ್ಲಿ ಬಂದು ಹೋದವರೆಷ್ಟು?
ಕೋಲ್ಕತ್ತಾದಲ್ಲಿ ಭಾನುವಾರ ನಡೆದದ್ದು ಅಕ್ಷರಶಃ ಫೈನಲ್ ಪಂದ್ಯ. ಇಂಡಿಯಾ ಮತ್ತು ವಿಂಡೀಸ್ ನಡುವಿನ ಪಂದ್ಯ ಅಷ್ಟೊಂದು ರೋಚಕವಾಗಿತ್ತು. ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ 195 ರನ್ ಗಳಿಸಿತು. ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಇದಕ್ಕೆ ಪ್ರತಿಯಾಗಿ, ನಾಯಕ ಶೈ ಹೋಪ್ 33 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 32 ರನ್ ಗಳಿಸಿದರು. ಶಿಮ್ರಾನ್ ಹೆಟ್ಮೆಯರ್, ಎರಡು ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 27 ರನ್ ಗಳಿಸಿದರು. ಹೋಲ್ಡರ್ 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 34 ರನ್ ಗಳಿಸಿದರು, ಆದರೆ ಪೊವೆಲ್ 22 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 37 ರನ್ ಗಳಿಸಿ ಅಜೇಯರಾಗಿ ಉಳಿದರು. ಪರಿಣಾಮವಾಗಿ, ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 195 ರನ್ ಗಳಿಸಿತು.
196 ರನ್‌ಗಳ ಗುರಿ ಪಡೆದ ಟೀಮ್ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (10) ಇಶಾನ್ ಕಿಶನ್ (10) ಬೇಗ ಔಟಾದರು. ವಿಕೆಟ್‌ಗಳು ಉರುಳುತ್ತಾ ಹೋದರೂ ಕೂಡಾ ಸಂಜು ಸ್ಯಾಮ್ಸನ್ ತಂಡದ ಇನ್ನಿಂಗ್ಸ್ ಅನ್ನು ಜವಬ್ದಾರಿಯುತವಾಗಿ ನೋಡಿಕೊಂಡಿದ್ದು ಭಾರತದ ಪಾಲಿಗೆ ವರವಾಗಿತ್ತು. ಆರಂಭದಲ್ಲಿ ಬಂದ ಸಂಜು ಸ್ಯಾಮ್ಸನ್ ಕೊನೆಯವರೆಗೂ ನಿಂತು ಅಬ್ಬರಿಸಿದರು. ಸಂಜು 50 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 97 ರನ್ ಗಳಿಸಿ ಭಾರತ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು. ಈ ಮೂಲಕ ಭಾರತ ಭರ್ಜರಿಯಾಗಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿತು.

ನೋಡಿರಿ

