ಸಚಿವ ಜಮೀರ್ಗೆ ಕಾನೂನು ಸಂಕಷ್ಟ! – 625 ಕೋಟಿ ರೂ. ದುರ್ಬಳಕೆ ಮಾಡಿದ್ರಾ ಜಮೀರ್!

ರಾಜ್ಯದ ಮತ್ತೊಬ್ಬ ಸಚಿವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಬರೋಬ್ಬರಿ 625 ಕೋಟಿ ರೂಪಾಯಿಗಳ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಜಮೀರ್ಗೆ ಲೋಕಾಯುಕ್ತದಿಂದ ನೋಟಿಸ್ ಜಾರಿಯಾಗಿದೆ.
ಇದನ್ನೂ ಓದಿ: ಇತ್ತ ಪಂದ್ಯ ಗೆದ್ದ ಸಂಭ್ರಮ ಅತ್ತ ತಂದೆಯ ಸಾವಿನ ಶೋಕ – ರಿಂಕು ಸಿಂಗ್ ತಂದೆ ವಿಧಿವಶ
ಸಚಿವ ಜಮೀರ್ ಅವರು ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ಮೀಸಲಾಗಿದ್ದ ಕೋಟ್ಯಂತರ ರೂಪಾಯಿ ಹಣವನ್ನು ನಿಯಮಬಾಹಿರವಾಗಿ ಬಳಸಿದ್ದಾರೆ. ಸರ್ಕಾರದ ಆರ್ಥಿಕ ಇಲಾಖೆಯ ಯಾವುದೇ ಪೂರ್ವಾನುಮತಿ ಪಡೆಯದೆ, ಗುತ್ತಿಗೆದಾರರ ಜೊತೆ ಶಾಮೀಲಾಗಿ ಈ ಬೃಹತ್ ಮೊತ್ತದ (625 ಕೋಟಿ ರೂ.) ಕಾಮಗಾರಿಗಳನ್ನು ಹಂಚಿಕೆ ಮಾಡಿ, ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಜೆಡಿಎಸ್ (JDS) ವಕ್ತಾರರಾದ ಪ್ರದೀಪ್ ಕುಮಾರ್ ಅವರು ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ಅಧಿಕೃತವಾಗಿ ದೂರು ಸಲ್ಲಿಕೆ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ಮೇಲಿನ ಹಣ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ಸಮಗ್ರ ವಿವರಣೆ ನೀಡುವಂತೆ ಸೂಚಿಸಲಾಗಿದೆ. ತಮ್ಮ ಉತ್ತರವನ್ನು ಎರಡು ಪ್ರತಿಗಳಲ್ಲಿ (Two copies) ಸಲ್ಲಿಸುವಂತೆ ಲೋಕಾಯುಕ್ತರು ನೋಟಿಸ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಇನ್ನು ಲೋಕಾಯುಕ್ತ ನೋಟಿಸ್ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಚಿವ ಜಮೀರ್ ಅಹ್ಮದ್, ತಮ್ಮ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದಾರೆ. ದೂರಿನಲ್ಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ಉತ್ತರ ಹಾಗೂ ದಾಖಲೆಗಳನ್ನು ಒದಗಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಜಮೀರ್ ಪರ ವಕೀಲರು ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.

ನೋಡಿರಿ

