ಇತ್ತ ಪಂದ್ಯ ಗೆದ್ದ ಸಂಭ್ರಮ ಅತ್ತ ತಂದೆಯ ಸಾವಿನ ಶೋಕ – ರಿಂಕು ಸಿಂಗ್ ತಂದೆ ವಿಧಿವಶ

ಇತ್ತ ಪಂದ್ಯ ಗೆದ್ದ ಸಂಭ್ರಮ ಅತ್ತ ತಂದೆಯ ಸಾವಿನ ಶೋಕ – ರಿಂಕು ಸಿಂಗ್ ತಂದೆ ವಿಧಿವಶ

ಟೀಮ್ ಇಂಡಿಯಾದ ಸ್ಟಾರ್ ಫಿನಿಷರ್ ರಿಂಕು ಸಿಂಗ್ ತಂದೆ ವಿಧಿವಶರಾಗಿದ್ದಾರೆ. ರಿಂಕು ಸಿಂಗ್ ತಂದೆ ಖಾನ್​ಚಂದ್ರ ಸಿಂಗ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ರಿಂಕು ಸಿಂಗ್ ತಂದೆಯ ಆರೋಗ್ಯ ವಿಚಾರಿಸಿ ಮತ್ತೆ ತಂಡವನ್ನು ಸೇರಿಕೊಂಡಿದ್ದರು. ಆದರೆ, ಜಿಂಬಾಬ್ವೆ ವಿರುದ್ಧ ಪಂದ್ಯ ಗೆದ್ದ ಸಂಭ್ರಮದ ನಡುವೆಯೇ ತಂದೆಯ ಸಾವಿನ ಶೋಕ ಅನುಭವಿಸಿದ್ದಾರೆ ರಿಂಕು ಸಿಂಗ್.

ಇದನ್ನೂ ಓದಿ:ಟೀಮ್ ಇಂಡಿಯಾ ಬಿರುಗಾಳಿ ಬ್ಯಾಟಿಂಗ್‌ಗೆ ಜಿಂಬಾಬ್ವೆ ತತ್ತರ – ಭಾರತದ ವಿರುದ್ಧ ಕೊನೇ ತನಕ ಹೋರಾಡಿ ಸೋತ ಬೆನೆಟ್

ರಿಂಕು ಸಿಂಗ್ ತಂದೆ ಖಾನ್​ಚಂದ್ರ ಸಿಂಗ್ ತೀವ್ರ ಅನಾರೋಗ್ಯದಿಂದಾಗಿ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ​ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಖಾನ್‌ಚಂದ್ರ ಸಿಂಗ್​ ಅವರ ಆರೋಗ್ಯ ಹದಗೆಟ್ಟಿತ್ತು. ವೈದ್ಯರು ಅವರನ್ನು ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡುತ್ತಿದ್ದರು. ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳ ಕಾರಣ ನಿರಂತರ ಡಯಾಲಿಸಿಸ್ ಕೂಡ ಮಾಡಲಾಗುತ್ತಿತ್ತು. ಕೊನೆಗೂ ಚಿಕಿತ್ಸೆ ಫಲಿಸಲಿಲ್ಲ.

ರಿಂಕು ಸಿಂಗ್ ಎರಡು ದಿನದ ಹಿಂದಷ್ಟೇ ತಂದೆಯನ್ನು ಆಸ್ಪತ್ರೆಯಲ್ಲಿ ನೋಡಿ ಬಂದಿದ್ದರು. ತನ್ನ ನೋವಿನ ನಡುವೆಯೂ ರಾಷ್ಟ್ರೀಯ ಕರ್ತವ್ಯಕ್ಕೆ ಮಹತ್ವ ನೀಡಿ, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕಾಗಿ ಟೀಮ್ ಇಂಡಿಯಾಕ್ಕೆ ಮರಳಿದ್ದರು. ಪಂದ್ಯದಲ್ಲಿ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗಲಿಲ್ಲ. ಆದರೇ ಫೀಲ್ಡಿಂಗ್ ಮಾಡಲು ಅವಕಾಶ ದೊರೆತಿತ್ತು. ಆ ಸಮಯದಲ್ಲಿ ತಂದೆಯ ಆರೋಗ್ಯದ ಬಗ್ಗೆ ಚಿಂತೆ ಅವರಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಫೀಲ್ಡಿಂಗ್ ವೇಳೆ ಸುಲಭ ಕ್ಯಾಚ್ ಕೂಡ ಬಿಟ್ಟಿದ್ದರು. ಆದರೂ ನಾಯಕ ಸೂರ್ಯಕುಮಾರ ಯಾದವ್ ರಿಂಕು ಮೇಲೆ ಯಾವುದೇ ಒತ್ತಡ ಹಾಕಲಿಲ್ಲ. ಕ್ಯಾಚ್ ತಪ್ಪಿದರೂ ಏನೂ ಹೇಳದೇ ಬೆಂಬಲ ನೀಡಿದರು. ಪಂದ್ಯ ಮುಗಿದ ತಕ್ಷಣ ರಿಂಕು ಮತ್ತೆ ಆಸ್ಪತ್ರೆಗೆ ಧಾವಿಸಿದರು. ಆದರೆ ಆಗಲೇ ತುಂಬಾ ತಡವಾಗಿತ್ತು. ತಂದೆಯ ನಿಧನದ ಸುದ್ದಿ ಅವರಿಗೆ ದೊಡ್ಡ ಆಘಾತವಾಯಿತು. ಈಗ ಅವರು ಮನೆಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮತ್ತೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ .

Sulekha

Leave a Reply

Your email address will not be published. Required fields are marked *