ಹ್ಯಾಟ್ರಿಕ್ ಸೊನ್ನೆ ಸುತ್ತಿದರೂ ಅಭಿಷೇಕ್ ಶರ್ಮಾ ನಂಬರ್ 1 – ಐದನೇ ಸ್ಥಾನಕ್ಕೇರಿದ ಇಶಾನ್ ಕಿಶನ್

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಯಂಗ್ ಗನ್ ಅಭಿಷೇಕ್ ಶರ್ಮಾ ತೀರಾ ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೂ ಕೂಡಾ ಟೀಂ ಇಂಡಿಯಾದ ಓಪನರ್ ಅಭಿಷೇಕ್ ಶರ್ಮಾ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ನಿಂದ ಇಶಾನ್ ಕಿಶನ್ ಐದನೇ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ:ಲಂಕಾ ದಹನ ಮಾಡಿದ ಕಿವೀಸ್ ಪಡೆ – ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಶ್ರೀಲಂಕಾ
ಟೀಂ ಇಂಡಿಯಾದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಟಿ20 ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸೊನ್ನೆ ಸುತ್ತಿದ್ದಾರೆ. ಆಡಿರುವ 4 ಪಂದ್ಯಗಳಲ್ಲಿ ಅಭಿಷೇಕ್ ಖಾತೆ ತೆರೆದಿರುವುದು ಒಂದೇ ಒಂದು ಪಂದ್ಯದಲ್ಲಿ ಮಾತ್ರ. ಆದರೂ ಕೂಡಾ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್ನಲ್ಲಿ ಅಭಿಷೇಕ್ ಶರ್ಮಾ ನಂಬರ್ ಸ್ಥಾನ ಉಳಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅಭಿಷೇಕ್ ಶರ್ಮಾ ಭರ್ಜರಿ ಫಾರ್ಮ್‌ನಲ್ಲಿದ್ದರು. ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನದ ಹೊರತಾಗಿಯೂ ಅಭಿಷೇಕ್ ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.
ಫೆಬ್ರವರಿ 25 ರ ಬುಧವಾರದಂದು ಐಸಿಸಿ ಇತ್ತೀಚಿನ ಟಿ20 ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಅಭಿಷೇಕ್ ಅವರ ರೇಟಿಂಗ್ ಪಾಯಿಂಟ್ 877 ಕ್ಕೆ ಕುಸಿದಿದೆ. ಎರಡನೇ ಸ್ಥಾನದಲ್ಲಿರುವ ಫಿಲ್ ಸಾಲ್ಟ್ 815 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಹೀಗಾಗಿ ಅಭಿಷೇಕ್ ನಂಬರ್ 1 ಸ್ಥಾನಕ್ಕೆ ಯಾವುದೇ ತೊಂದರೆ ಇಲ್ಲ. ಇನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರ ಅಮೋಘ ಪ್ರದರ್ಶನ ನೀಡುತ್ತಿರುವ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಮೂರನೇ ಸ್ಥಾನಕ್ಕೇರಿದ್ದಾರೆ. ವಿಶ್ವಕಪ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸಂಚಲನ ಸೃಷ್ಟಿಸಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರುವ ಇಶಾನ್ ಕಿಶನ್ ಮೂರು ಸ್ಥಾನಗಳೇರಿದ್ದು, ಐದನೇ ಸ್ಥಾನದಲ್ಲಿದ್ದಾರೆ. ಇಶಾನ್, ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಉಳಿದಂತೆ ಸೂರ್ಯಕುಮಾರ್ ಯಾದವ್ ಆರನೇ ಸ್ಥಾನದಲ್ಲಿ ಮುಂದುವರಿದಿದ್ದರೆ, ತಿಲಕ್ ವರ್ಮಾ ಎರಡು ಸ್ಥಾನಗಳ ಕುಸಿತದೊಂದಿಗೆ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ. ಹಾಗೆಯೇ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ 10 ಸ್ಥಾನಗಳ ಜಿಗಿತದೊಂದಿಗೆ ಬ್ಯಾಟಿಂಗ್‌ನಲ್ಲಿ ಒಂಬತ್ತನೇ ಸ್ಥಾನವನ್ನು ತಲುಪಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕಳಪೆ ಪ್ರದರ್ಶನದ ಹೊರತಾಗಿಯೂ ವರುಣ್ ಚಕ್ರವರ್ತಿ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಏಳು ಸ್ಥಾನಗಳನ್ನು ಮೇಲೇರಿ ಎಂಟನೇ ಸ್ಥಾನವನ್ನು ತಲುಪಿದ್ದಾರೆ.

ನೋಡಿರಿ

