‘ತೆನೆ’ ಇಳಿಸಿ ‘ಕೈ’ಗೆ ಜಾರಿದ ದಳಪತಿಗಳು- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಹವಾ..!

‘ತೆನೆ’ ಇಳಿಸಿ ‘ಕೈ’ಗೆ ಜಾರಿದ ದಳಪತಿಗಳು- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಹವಾ..!

ಸಿದ್ದರಾಮಯ್ಯಗೆ ಸೋಲಿನ ರುಚಿ ತೋರಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ವಿರುದ್ಧ ಜೆಡಿಎಸ್ ಬಂಡಾಯ ನಾಯಕರು ಸಿಡಿದೆದ್ದಿದ್ದಾರೆ. ಮಾತ್ರವಲ್ಲದೆ ಪಕ್ಷವನ್ನೇ ತೊರೆದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಕೋಟೆ ಸೇರಿಕೊಳ್ತಿದ್ದಾರೆ.

ಇದನ್ನೂ ಓದಿ:ಬಜೆಟ್ ಮಂಡನೆಗೆ ಭರ್ಜರಿ ಸಿದ್ಧತೆ – ಈ ಸಲ ಯಾರಿಗೆಲ್ಲಾ ಬಂಪರ್ ಆಫರ್..!?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರ ಭಾರೀ ಸಂಚಲನ ಮೂಡಿಸಿತ್ತು. ಹಾಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನೇ ಕ್ಷೇತ್ರದ ಜನ ಸೋಲಿಸಿದ್ದರು. ಜೆಡಿಎಸ್ ಹಿರಿಯ ನಾಯಕ ಜಿ.ಟಿ ದೇವೇಗೌಡ ಭರ್ಜರಿ ಜಯ ಸಾಧಿಸಿದ್ದರು. ಈ ಮೂಲಕ ಜೆಡಿಎಸ್​​ಗೆ ದೊಡ್ಡ ಗೆಲುವೇ ಸಿಕ್ಕಂತಾಗಿತ್ತು.

ಹೀಗೆ ಸಿದ್ದರಾಮಯ್ಯರನ್ನೇ ಸೋಲಿಸಿ ರಾಜಕೀಯ ಲೆಕ್ಕಾಚಾರ ಬುಡಮೇಲು ಮಾಡಿದ್ದ ಇದೇ ಕ್ಷೇತ್ರದ ಜೆಡಿಎಸ್​ನಲ್ಲಿ ಈಗ ಭಿನ್ನಮತ ಸ್ಫೋಟಗೊಂಡಿದೆ. ದೇವೇಗೌಡ ವಿರುದ್ಧ ಗರಂ ಆಗಿರೋ ನಾಯಕರು ಸ್ವತಃ ಸಿದ್ದರಾಮಯ್ಯ ನೇತೃತ್ವದಲ್ಲೇ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಲಿಂಗದೇವರ ಕೊಪ್ಪಲಿನಲ್ಲಿ ಇದಕ್ಕಾಗಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಜಿ.ಟಿ. ದೇವೇಗೌಡರನ್ನು ಮತ್ತೆ ಜೆಡಿಎಸ್​ಗೆ ಸೇರಿಸಿಕೊಂಡಿದ್ದಕ್ಕೆ ಕೆಲ ನಾಯಕರು ಪಕ್ಷ ತೊರೆದಿದ್ದಾರೆ. ಟಿ. ನರಸೀಪುರದ ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ದೇವರಾಜು, ಕೆಂಪನಾಯಕ, ಕಾಟೂರು ದೇವರಾಜು ಸೇರಿದಂತೆ ಹಲವರು ಕಾಂಗ್ರೆಸ್​ ಪಕ್ಷ ಸೇರಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್, ಮಾಜಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಮಾಜಿ ಶಾಸಕ ಕೆ.ವೆಂಕಟೇಶ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮೈಸೂರು, ಚಾಮರಾಜನಗರ ಜಿಲ್ಲೆಯ ಪಕ್ಷದ ಮುಖಂಡರ ಜತೆ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ.  ಸಭೆಯಲ್ಲಿ ಪಕ್ಷ ಸಂಘಟನೆ, ಮುಂದಿನ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ಮಾಡಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

suddiyaana