ಬ್ರೂಕ್ ಬಿರುಗಾಳಿ ಬ್ಯಾಟಿಂಗ್‌ಗೆ ಹೊರಬಿದ್ದ ಪಾಕಿಸ್ತಾನ – ಸೆಮಿಫೈನಲ್‌ಗೆ ಇಂಗ್ಲೆಂಡ್ ಎಂಟ್ರಿ

ಬ್ರೂಕ್ ಬಿರುಗಾಳಿ ಬ್ಯಾಟಿಂಗ್‌ಗೆ ಹೊರಬಿದ್ದ ಪಾಕಿಸ್ತಾನ – ಸೆಮಿಫೈನಲ್‌ಗೆ ಇಂಗ್ಲೆಂಡ್ ಎಂಟ್ರಿ

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಸೂಪರ್ 8 ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ ರೋಚಕ ಜಯ ಸಾಧಿಸಿದೆ. ಜೊತೆಗೆ ಇಂಗ್ಲೆಂಡ್ ಕ್ಯಾಪ್ಟನ್ ಸಿಡಿಸಿದ ಸೆಂಚುರಿ ಬಿರುಗಾಳಿಗೆ ಪಾಕಿಸ್ತಾನ ಟೀಮ್ ಟೂರ್ನಿಯಿಂದಲೇ ಹೊರಗೆ ಬಿದ್ದಿದೆ. ಸತತ ಎರಡನೇ ಗೆಲುವು ಸಾಧಿಸಿದ ಇಂಗ್ಲೆಂಡ್ ಸೆಮಿಫೈನಲ್‌ಗೆ ಎಂಟ್ರಿ ನೀಡಿದೆ.

ಇದನ್ನೂ ಓದಿ:ಕಿಶನ್ ಒನ್ ಡೌನ್.. ತಿಲಕ್ ಔಟ್! – ತಂಡದಲ್ಲಿ ಇದ್ದೂ ಇಲ್ಲದಾದ ರಿಂಕು

ಪಾಕಿಸ್ತಾನ ತಂಡ ಸೂಪರ್ 8 ಸುತ್ತಿನಲ್ಲೇ ತನ್ನ ವಿಶ್ವಕಪ್ ಪ್ರಯಾಣವನ್ನು ಮುಗಿಸೋದು ಬಹುತೇಕ ಖಚಿತವಾಗಿದೆ. ಇಂಗ್ಲೆಂಡ್ ವಿರುದ್ಧದ  ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಮತ್ತೆ ಉಳಿದ ಬ್ಯಾಟರ್ ಗಳು ದೊಡ್ಡ ಸ್ಕೋರ್ ಮಾಡಿರಲಿಲ್ಲ. ಪಾಕಿಸ್ತಾನದ ಸೂಪರ್ ಹೀರೋ ಅಂತಾನೇ ಫೇಮಸ್ ಆಗಿರುವ ಬಾಬರ್ ಆಝಂ 25 ರನ್ ಗಳಿಸಿ ಔಟಾದರು. ಜೊತೆಗೆ ಫಖರ್ ಜಮಾನ್ ಕೂಡಾ 25 ರನ್ ಗಳಿಸಿದರು. ನಂತರ ಬಂದ ಬ್ಯಾಟರ್‌ಗಳು ಜಾಸ್ತಿ ಹೊತ್ತು ಕ್ರೀಸ್‌ನಲ್ಲಿ ಉಳಿಯಲೇ ಇಲ್ಲ.

165 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಶಾಹೀನ್ ಅಫ್ರಿದಿ ಅವರ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಆರಂಭಿಕರಾದ ಫಿಲ್ ಸಾಲ್ಟ್ (0) ಮತ್ತು ಜೋಸ್ ಬಟ್ಲರ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬಂದಷ್ಟೇ ವೇಗವಾಗಿ ಜಾಕೋಬ್ ಬೆಥಲ್ ಮತ್ತು ಟಾಮ್ ಬ್ಯಾಂಟನ್ ಕೂಡಾ ಪೆವಿಲಿಯನ್ ಸೇರಿಕೊಂಡರು. ಆಗ ಪಾಕಿಸ್ತಾನ ಆಟಗಾರರು ಗೆಲ್ಲೋದೇ ನಾವೇ ಎಂಬ ಜೋಶ್‌ನಲ್ಲಿ ಸಂಭ್ರಮಿಸಿದರು. ನಂತರ ಸಿಕ್ಕಿದ್ದೇ ರೋಚಕ ತಿರುವು. 4 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ ತಂಡವನ್ನು ಕಾಪಾಡಿದ್ದು ಕ್ಯಾಪ್ಟನ್ ಹ್ಯಾರಿ ಬ್ರೂಕ್. ನಾಯಕ ಹ್ಯಾರಿ ಬ್ರೂಕ್ ಕೇವಲ 51 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 100 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು. ಜೊತೆಗೆ ಸೆಮಿಫೈನಲ್‌ಗೂ ಎಂಟ್ರಿಕೊಟ್ಟರು.

ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರದ್ದಾಗಿದ್ದರಿಂದ ಪಾಕಿಸ್ತಾನ ಒಂದು ಅಂಕ ಗಳಿಸಿದೆ. ಇದೀಗ ಇಂಗ್ಲೆಂಡ್ ವಿರುದ್ಧ ಸೋತ ಪಾಕಿಸ್ತಾನ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರಿ ಗೆಲುವಿನೊಂದಿಗೆ ಹೋರಾಡಬೇಕಿದೆ. ಇನ್ನು ಇಂಗ್ಲೆಂಡ್ ಸತತ ಎರಡನೇ ಗೆಲುವು ದಾಖಲಿಸಿ 4 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Sulekha

Leave a Reply

Your email address will not be published. Required fields are marked *