ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಯಾತ್ರೆ – ಮಳೆ ನಡುವೆಯೂ ಜಾಕೆಟ್ ಧರಿಸಿ ಹೆಜ್ಜೆ..!
ಚಳಿ, ಗಾಳಿ, ಬಿಸಿಲು, ಮಳೆಯನ್ನೂ ಲೆಕ್ಕಿಸದೇ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಸದ್ಯ ಕಾಶ್ಮೀರ ತಲುಪಿದ್ದು ಮಳೆ ನಡುವೆಯೂ ರಾಹುಲ್ ಜಾಕೆಟ್ ಧರಿಸಿ ಯಾತ್ರೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬಜೆಟ್ ಮಂಡನೆಗೆ ಭರ್ಜರಿ ಸಿದ್ಧತೆ – ಈ ಸಲ ಯಾರಿಗೆಲ್ಲಾ ಬಂಪರ್ ಆಫರ್..!?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಪಂಜಾಬ್‌ನಿಂದ ಕಾಶ್ಮೀರ ತಲುಪಿದ್ದು, ಕೊನೇ ಹಂತ ತಲುಪಿದೆ. ಉತ್ತರ ಭಾರತದಾದ್ಯಂತ ಚಳಿಯಲ್ಲೂ ಕೇವಲ ಟೀ ಶರ್ಟ್ ಧರಿಸಿ ಮೆರವಣಿಗೆ ನಡೆಸಿದ್ದ ರಾಹುಲ್ ಇಂದು ಮೊದಲ ಬಾರಿಗೆ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಮ್ಮುವಿನ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿದ್ದರಿಂದ ರಾಹುಲ್ ಗಾಂಧಿ ರೈನ್ ಕೋಟ್ ಧರಿಸಿದ್ದಾರೆ ಎನ್ನಲಾಗಿದೆ. ಮಳೆ ಸ್ವಲ್ಪ ಬಿಡುವು ಕೊಟ್ಟ ಬಳಿಕ ಜಾಕೆಟ್ ತೆಗೆದು ಬಿಳಿ ಟೀ ಶರ್ಟ್ ತೊಟ್ಟು ಹೆಜ್ಜೆ ಹಾಕಿದ್ದಾರೆ. 125 ದಿನಗಳಿಂದ ಇದುವರೆಗಿನ 3,400 ಕಿಲೋಮೀಟರ್‌ಗಳ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬಿಳಿ ಟಿಶರ್ಟ್, ಜೀನ್ಸ್ ಧರಿಸಿ ನಡೆಯುತ್ತಿರುವುದು ಅನೇಕರಿಗೆ ಕುತೂಹಲ ಹುಟ್ಟಿಸಿತ್ತು.
ರಾಹುಲ್ ಗಾಂಧಿ ಜನವರಿ 25 ರಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಎರಡು ದಿನಗಳ ಬಳಿಕ ಅಂದರೆ ಜನವರಿ 27 ರಂದು ಅನಂತನಾಗ್ ಮೂಲಕ ಶ್ರೀನಗರವನ್ನು ಪ್ರವೇಶಿಸಲು ನಿರ್ಧರಿಸಲಾಗಿದೆ.
ಇಂದು ಕಥುವಾದ ಹತ್ಲಿ ಮೋರ್ಹ್‌ನಿಂದ ಪುನರಾರಂಭಗೊಂಡ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದ್ದು, ಪೊಲೀಸರು ಮತ್ತು ಅರೆಸೇನಾ ಪಡೆಗಳು ರಾಹುಲ್ ಯನ್ನು ಸುತ್ತುವರಿದಿವೆ. ಜಾಮರ್‌ಗಳನ್ನೂ ಹಾಕಲಾಗಿದೆ. ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ನಡೆಯದಂತೆ ಭದ್ರತಾ ಏಜೆನ್ಸಿಗಳು ರಾಹುಲ್ ಗಾಂಧಿಗೆ ಸಲಹೆ ನೀಡಿವೆ. ನಾಳೆ ಬೆಳಗ್ಗೆ ಹೀರಾನಗರದಿಂದ ದುಗ್ಗರ್ ಹವೇಲಿಗೆ ಹೊರಟು ಜನವರಿ 22ರಂದು ವಿಜಯಪುರದಿಂದ ಸತ್ವಾರಿಗೆ ತೆರಳಲಿದೆ. ಇನ್ನು ಜನವರಿ 30 ರಂದು ಶ್ರೀನಗರದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.