ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಮೆಟ್ರೋದಲ್ಲಿ ಮದ್ಯದ ಬಾಟಲ್​​ ಸಾಗಾಟಕ್ಕೆ ಅನುಮತಿ?

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಮೆಟ್ರೋದಲ್ಲಿ ಮದ್ಯದ ಬಾಟಲ್​​ ಸಾಗಾಟಕ್ಕೆ ಅನುಮತಿ?

ಸಿಲಿಕಾನ್‌ ಸಿಟಿ ಬೆಂಗೂರಿನಲ್ಲಿ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್‌ನ್ಯೂಸ್‌ ನೀಡಲು ಮುಂದಾಗಿದೆ. ಸೀಲ್ಡ್ ಮಾಡಿರುವ ಮದ್ಯದ ಬಾಟಲಿಗಳನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಸಾಗಿಸಲು ಅನುಮತಿ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಹಲ್ಲು ನೋವೆಂದು ಆಸ್ಪತ್ರೆಗೆ ಹೋದಾಕೆಗೆ ಅನಸ್ತೇಶಿಯಾ ನೀಡಿದ ವೈದ್ಯರು! – ಕೋಮಾಗೆ ಜಾರಿದ ಮಹಿಳೆ

ನಮ್ಮ ಮೆಟ್ರೋದಲ್ಲಿ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಹಲವು ಬಾರಿ ಚರ್ಚಿಸಿದೆ. ಇತ್ತೀಚಿನ ಸಭೆಯಲ್ಲಿಯೂ ಮತ್ತೆ ಮದ್ಯ ಕೊಂಡೊಯ್ಯುವ ಬಗ್ಗೆ ಪ್ರಸ್ತಾಪಿಸಲಾಗಿದೆ. ತಾತ್ವಿಕ ಅನುಮತಿ ದೊರೆತಿದ್ದರೂ, ಜಾರಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎನ್ನಲಾಗಿದೆ.

ದೆಹಲಿ ಮಾದರಿಯನ್ನು ನಮ್ಮ ಮೆಟ್ರೋದಲ್ಲಿಯೂ ಅನುಸರಿಸುವ ಬಗ್ಗೆ ಚರ್ಚೆ ನಡೆದಿದೆ. ಪ್ರಸ್ತುತ ದೆಹಲಿ ಮೆಟ್ರೋದ ಏರ್‌ಪೋರ್ಟ್ ಮಾರ್ಗದಲ್ಲಿ ಮದ್ಯ ಸಾಗಿಸಲು ಅನುಮತಿ ಇದೆ. ನಮ್ಮ ಮೆಟ್ರೋ ಏರ್‌ಪೋರ್ಟ್‌ಗೆ ಸಂಪರ್ಕ ಹೊಂದಿದ ಬಳಿಕ, ರಾಜ್ಯದಲ್ಲಿಯೂ ಮೆಟ್ರೋಗಳಲ್ಲಿ ಮದ್ಯ ಸಾಗಾಟಕ್ಕೆ ಅನುಮತಿ ನೀಡುವ ಬಗ್ಗೆ ಸಮಾಲೋಚನೆ ನಡೆದಿದೆ. BMRCL ಅಧಿಕಾರಿಗಳ ಪ್ರಕಾರ ಮದ್ಯದ ಬಾಟಲಿ ಸಾಗಿಸಲು ಯಾವುದೇ ವಿಶೇಷ ಅನುಮತಿ ಅಥವಾ ಪ್ರತ್ಯೇಕ ಪರವಾನಗಿ ಅಗತ್ಯವಿಲ್ಲ. ಅನುಮೋದನೆ ಸಿಕ್ಕ ಬಳಿಕ ಮೆಟ್ರೋ ನಿಯಮಾವಳಿಗಳಲ್ಲಿ ಅಗತ್ಯ ತಿದ್ದುಪಡಿ ನಡೆಯಲಿದೆ.

ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಪ್ರಸ್ತುತವಾಗಿ ಅನುಮತಿ ಇಲ್ಲ. ಹೀಗಿದ್ದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋದಲ್ಲಿ ಮದ್ಯ ಸೇವಿಸಿರುವವರು ಪ್ರಯಾಣಿಸಬಹುದು. ಆದರೆ ಸೇವನೆ ಅನುಮತಿಸಿದ ಮಿತಿಯೊಳಗೇ ಇರಬೇಕು ಎಂದಿದ್ದರೂ ಆ ಕುರಿತ ಸ್ಪಷ್ಟ ವಿವರಣೆ ನೀಡಲಾಗಿಲ್ಲ. ಪ್ರಯಾಣಿಕರು ಅಸಭ್ಯವಾಗಿ ವರ್ತಿಸಬಾರದು ಅಥವಾ ಇತರರಿಗೆ ಅಸೌಕರ್ಯ ಉಂಟುಮಾಡಬಾರದು ಎಂಬುದೇ ಈ ನಿಯಮದ ಉದ್ದೇಶ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮದ್ಯ ಸಾಗಿಸಲು ಏಕೆ ನಿಷೇಧ ಎಂಬ ಪ್ರಶ್ನೆ ಕೇಳಿಬರುತ್ತಿದೆ. ರೈಲಿನೊಳಗೆ ತಿನ್ನುವುದು ಮತ್ತು ಕುಡಿಯುವುದಕ್ಕೆ ಅನುಮತಿ ಇಲ್ಲದಿದ್ದರೂ ಸೀಲ್ಡ್ ಮಾಡಿದ ಬಾಟಲಿಯನ್ನು ಸಾಮಾನ್ಯ ಸರಕುಗಳಂತೆ ಸಾಗಿಸಲು ತೊಂದರೆ ಇರಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿವೆ. ಕೆಲವೆಡೆ ಭದ್ರತಾ ಸಿಬ್ಬಂದಿ ಬಾಟಲಿಗಳನ್ನು ಸಾಗಿಸಲು ಅವಕಾಶ ನೀಡಿದ ಉದಾಹರಣೆಗಳೂ ಇವೆ ಎನ್ನಲಾಗ್ತಿದೆ.

Shwetha M