ಮಹಿಳೆ ಸರ ಕಿತ್ತು ಎಸ್ಕೇಪ್ ಆಗುತ್ತಿದ್ದ ಖದೀಮ! – 1 ಕಿಮೀ ಚೇಸ್ ಮಾಡಿ ಹಿಡಿದ ಪೊಲೀಸ್ ಕಾನ್ಸ್ಟೇಬಲ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಲೇ ಇದೆ. ಹಾಡಹಗಲೇ ಮಹಿಳೆಯರನ್ನು ಟಾರ್ಗೆಟ್ ಮಾಡಿ ಆಭರಣ ದೋಚುತ್ತಿದ್ದಾರೆ. ಇದೀಗ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಖ್ಯಾತ ನಟಿ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್! – ಆ ದಿನ ಆಗಿದ್ದೇನು?
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 5 ರಂದು ಈ ಘಟನೆ ನಡೆದಿದೆ. ನಗರದಲ್ಲಿ ಹಾಡಹಗಲೇ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದಾತನನ್ನು ಕೆಚ್ಚೆದೆಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಸುಮಾರು ಒಂದು ಕಿಲೋಮೀಟರ್ ಬೆನ್ನಟ್ಟಿ ಅರೆಸ್ಟ್ ಮಾಡಿದ್ದಾರೆ.
ದ್ರಾಕ್ಷಾಯಣಿ ಎಂಬ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಆರೋಪಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಸ್ಥಳದಲ್ಲಿದ್ದ ಸಶಸ್ತ್ರ ಮೀಸಲು ಪಡೆಯ (CAR) ಕಾನ್ಸ್ಟೇಬಲ್ ಹಣಮಂತ ಪುಟಾಣಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳನನ್ನು ಬಿಡದ ಹಣಮಂತ ಅವರು, ಸತತ ಒಂದು ಕಿಲೋಮೀಟರ್ ವರೆಗೆ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಕೊನೆಗೂ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ಸೈಯದ್ ಜಾಫರ್ ಎಂದು ಗುರುತಿಸಲಾಗಿದೆ. ಪೊಲೀಸರು ಆತನಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ, 40 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಕರ್ತವ್ಯ ಪ್ರಜ್ಞೆ ಮೆರೆದ ಕಾನ್ಸ್ಟೇಬಲ್ ಹಣಮಂತ ಪುಟಾಣಿ ಅವರ ಸಾಹಸಕ್ಕೆ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.ಇನ್ನು ಸಾರ್ವಜನಿಕ ವಲಯದಲ್ಲಿ ಪೊಲೀಸ್ ಬೆನ್ನಟ್ಟಿ ಕಳ್ಳನನ್ನ ಹಿಡಿದ ಪರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡಿರಿ

