ಹೆಂಡತಿಗೆ ಗರ್ಭಪಾತ ಆಗಿದ್ದಕ್ಕೆ ಪಕ್ಕದ ಮನೆಯವರನ್ನು ದೇವರಿಗೆ ಬಲಿ ಕೊಟ್ಟ ವ್ಯಕ್ತಿ!

ಕಾಲ ಎಷ್ಟು ಮುಂದುವರಿದ್ರೂ ಜನರ ಮನಸ್ಥಿತಿ ಬದಲಾಗಿಲ್ಲ. ಆಧುನಿಕ ಯುಗದಲ್ಲೂ ಜನ ಮೂಢನಂಬಿಕೆಯಿಂದ ಹೊರ ಬಂದಿಲ್ಲ. ಇದೀಗ ಇಲ್ಲೊಂದು ಕಡೆ ಪತ್ನಿಗೆ ಗರ್ಭಪಾತ ಆಯ್ತು ಎಂದು ವ್ತಕ್ತಿಯೊಬ್ಬ ಪಕ್ಕದ ಮನೆಯವರನ್ನು ದೇವರಿಗೆ ಬಲಿ ಕೊಟ್ಟಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆಬ್ರವರಿ 15 ರಂದು ಮಾಂಸ ಮಾರಾಟ, ವಧೆ ನಿಷೇಧ
ಈ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಅತರ್ವಾ ಗ್ರಾಮದಲ್ಲಿ ನಡೆದಿದೆ. ಛತ್ರಪತಿ ಸಿಂಗ್ ಎಂಬಾತ ಪತ್ನಿಯ ಗರ್ಭಪಾತದಿಂದ ಮನನೊಂದಿದ್ದಾನೆ. ದೇವರು ಕೋಪ ಮಾಡಿಕೊಂಡಿದ್ದಾರೆ. ದೇವರನ್ನು ಪ್ರಸನ್ನಗೊಳಿಸಬೇಕು ಎಂದು ಪಕ್ಕದ ಮನೆಯವರನ್ನು ಬಲಿ ನೀಡಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ದಾಳಿ ವೇಳೆ ರಕ್ಷಣೆಗೆ ಬಂದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಆರೋಪಿ ಛತ್ರಪತಿ ಸಿಂಗ್, ತನ್ನ ಮನೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿರುವುದಾಗಿ ನೆರೆಹೊರೆಯವರಾದ ಫೂಲ್ ಕುಮಾರಿ ಸಿಂಗ್ ಮತ್ತು ಕೆಮ್ಲಾ ಸಿಂಗ್ ಅವರನ್ನು ಆಹ್ವಾನಿಸಿದ್ದಾನೆ. ಇವರು ಮುಂಜಾನೆ 4 ಗಂಟೆಯ ಸುಮಾರಿಗೆ ಸಿಂಗ್ ಮನೆಗೆ ಬಂದಾಗ, ಆರೋಪಿ ಅವರ ಮೇಲೆ ಹಠಾತ್ತನೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾನೆ. ದಾಳಿ ವೇಳೆ ಕೆಮ್ಲಾ ಹಾಗೂ ಫೂಲ್ ಕಿರುಚಾಡಿದ್ದಾರೆ. ಕಿರುಚಾಟ ಕೇಳಿ ಸುಮಿತ್ರಾ ಸಿಂಗ್ ಮತ್ತು ರಾಮ್ಭಜನ್ ಸಿಂಗ್ ಎಂಬುವವರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಛತ್ರಪತಿ ಸಿಂಗ್ ಅವರ ಮೇಲೆಯೂ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಕ್ಕದ ಮನೆಯವರನ್ನು ಹತ್ಯೆ ಮಾಡಿದ್ದೇಕೆ?
ಪ್ರಾಥಮಿಕ ತನಿಖೆಯ ಪ್ರಕಾರ, ಛತ್ರಪತಿ ಪತ್ನಿ ಇತ್ತೀಚೆಗೆ ಗರ್ಭಪಾತಕ್ಕೊಳಗಾಗಿದ್ದರು. ಇದರಿಂದ ದೇವರು ಕೋಪಗೊಂಡಿದ್ದಾರೆ ಮತ್ತು ಬಲಿ ನೀಡಿದರೆ ಮಾತ್ರ ದೇವರು ಶಾಂತರಾಗುತ್ತಾರೆ ಎಂಬ ಬಲವಾದ ನಂಬಿಕೆ ಆರೋಪಿಯಲ್ಲಿ ಮನೆಮಾಡಿತ್ತು. ಹೀಗಾಗಿ ಕೊಲೆಗೂ ಕೆಲವು ದಿನಗಳ ಮೊದಲು ಆರೋಪಿ ತನ್ನ ಮನೆಯ ಹೊರಗೆ ಮಣ್ಣಿನ ಪೀಠವನ್ನು ನಿರ್ಮಿಸಿ, ಗುರುವಾರ ವಿಶೇಷ ಪೂಜೆ ಮಾಡುವುದಾಗಿ ನೆರೆಹೊರೆಯವರಿಗೆ ಹೇಳಿದ್ದ. ಬಳಿಕ ನೆರೆ ಮನೆಯವರನ್ನು ಪೂಜೆಗೆ ಅಹ್ವಾನಿಸಿದ್ದ. ಪಕ್ಕದ ಮನೆಯವರು ಮನೆಗೆ ಬರುತ್ತಿದ್ದಂತೆ ಅವರನ್ನ ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳದಿಂದ ತೆಂಗಿನಕಾಯಿ ಹಾಗೂ ಪೂಜಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಗಾಯತ್ರಿ ತಿವಾರಿ ಮಾತನಾಡಿ, ಆರೋಪಿ ಮತ್ತು ಸಂತ್ರಸ್ತರು ಒಂದೇ ಸಮುದಾಯದವರಾಗಿದ್ದು, ದೂರದ ಸಂಬಂಧಿಗಳಾಗಿದ್ದಾರೆ. ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ, ಎಂದು ತಿಳಿಸಿದ್ದಾರೆ. ಪ್ರಸ್ತುತ ಆರೋಪಿ ಛತ್ರಪತಿ ಸಿಂಗ್ ಪೊಲೀಸ್ ವಶದಲ್ಲಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ಮಾನಸಿಕ ಭ್ರಮೆಯಿಂದ ನಡೆಸಿದ್ದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೋಡಿರಿ

