ಶಾಲೆಯಲ್ಲಿ ವಿದ್ಯಾರ್ಥಿನಿ ಬೆರಳುಗಳೇ ಕಟ್! – ಮಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ 2 ಸಾವಿರ ಕೊಟ್ಟು ಕಳುಹಿಸಿದ ಶಿಕ್ಷಕರು!

ಶಾಲೆಗಳಲ್ಲಿ ಮಕ್ಕಳ ಸಣ್ಣ ಪುಟ್ಟ ಗಾಯ ಮಾಡಿಕೊಳ್ಳೋದು ಕಾಮನ್. ಆದ್ರೀಗ ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿನಿಯ ಕೈ ಬೆರಳುಗಳೇ ಕಟ್ ಆಗಿದೆ. ಇದೀಗ ಶಿಕ್ಷಕರ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ: ಹೊಸಕೋಟೆ ಬಳಿ ಭೀಕರ ಅಪಘಾತಕ್ಕೆ 7 ಮಂದಿ ಬಲಿ! – ಜಾಲಿ ರೈಡ್ ಹೊರಟ ವಿದ್ಯಾರ್ಥಿಗಳು ದುರಂತ ಅಂತ್ಯ!
ತುಮಕೂರು ಗ್ರಾಮಾಂತರ ಪ್ರದೇಶದ ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಒಂದನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳ ಕಟ್ ಆಗಿದೆ. ಇದೀಗ ಶಾಲಾ ಶಿಕ್ಷಕರ ವಿರುದ್ಧ ಬಾಲಕಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆ ಬಿಸಿಯೂಟಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟುಕೊಂಡಿದ್ದಾಗ, ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಆಕೆಯ ಬಲಗೈಯ ಎರಡು ಬೆರಳುಗಳು ಕಟ್ ಆಗಿವೆ ಎನ್ನಲಾಗಿದೆ. ಘಟನೆ ನಂತರ ಶಿಕ್ಷಕರು ಸಮರ್ಪಕ ಚಿಕಿತ್ಸೆ ನೀಡದೆ, ಗಾಯಗೊಂಡ ಸ್ಥಳಕ್ಕೆ ನೀರು ಸುರಿದು ಬ್ಯಾಂಡೇಜ್ ಹಾಕಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇದಲ್ಲದೆ ಬಾಲಕಿಯ ಪೋಷಕರಿಬ್ಬರೂ ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರಿಗೆ ಘಟನೆಯ ಬಗ್ಗೆ ಕೇಳಿದಾಗ ನಿರ್ಲಕ್ಷ್ಯ ತೋರಿದ್ದಲ್ಲದೆ ಪೋಷಕರಿಗೆ 2000 ರೂ.ಗಳನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.
ಪೋಷಕರು ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಕಟ್ ಆದ ಬೆರಳುಗಳನ್ನು ತರಲು ಸೂಚಿಸಿದ್ದರು. ಆಗ ಮಾತ್ರ ಬೆರಳುಗಳನ್ನು ಮೊದಲಿಂತೆ ಕೂಡಿಸಬಹುದೆಂದು ಹೇಳಿದ್ದರು. ಆದರೆ ಶಿಕ್ಷಕರನ್ನು ಕೇಳಿದಾಗ ಶಾಲೆಯಲ್ಲಿ ಬಾಲಕಿಯ ಬೆರಳುಗಳು ಲಭ್ಯವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ನ್ಯಾಯ ದೊರಕಬೇಕು ಎಂದು ವಿದ್ಯಾರ್ಥಿನಿಯ ತಾಯಿ ಅಂಬಿಕಾ ಆಗ್ರಹಿಸಿದ್ದಾರೆ.

ನೋಡಿರಿ

