ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಮೂಲಕ ಇತಿಹಾಸ ಬರೆದ ಇಟಲಿ – ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ
ಕ್ರಿಕೆಟ್ ಶಿಶುಗಳ ಕಾಳಗದಲ್ಲಿ ಇತಿಹಾಸ ಬರೆದ ಇಟಲಿ

ಟಿ20 ವಿಶ್ವಕಪ್‌ನಲ್ಲಿ ನೇಪಾಳದ ವಿರುದ್ಧ ಇಟಲಿ ಚೊಚ್ಚಲ ಗೆಲುವು ದಾಖಲಿಸಿದೆ. ಅದು ಕೂಡಾ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಇಟಲಿಯ ಈ ಗೆಲುವು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅಧ್ಯಾಯ ಬರೆದಿದೆ.
ಇದನ್ನೂ ಓದಿ:ಕಿಶನ್, ಪಾಂಡ್ಯ ಮ್ಯಾಜಿಕ್ – ನಮೀಬಿಯಾ ವಿರುದ್ಧ ಭಾರತಕ್ಕೆ 93 ರನ್‌ಗಳ ಜಯ!
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್ನ 17ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ದೇಶಗಳಾದ ನೇಪಾಳ ಹಾಗೂ ಇಟಲಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 123 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಮೊದಲು ಬ್ಯಾಟಿಂಗ್ ಮಾಡುವಾಗ ನೇಪಾಳಕ್ಕೆ ಉತ್ತಮ ಆರಂಭ ಸಿಗಲಿಲ್ಲ. 49 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಕುಶಾಲ್ ಭುರ್ತಾಲ್ ಐದು ರನ್‌ಗಳಿಗೆ ಔಟಾದರೆ, ನಾಯಕ ರೋಹಿತ್ ಪೌಡೆಲ್ 14 ಎಸೆತಗಳಲ್ಲಿ 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಸಿಫ್ ಶೇಖ್ ಕೂಡ 20 ರನ್ ಗಳಿಸಿದರು. ನೇಪಾಳ ಪರ ಆರಿಫ್ ಶೇಖ್ 27 ರನ್ ಗಳಿಸಿದ್ದೇ ದೊಡ್ಡ ಸ್ಕೋರ್ ಆಗಿತ್ತು. ಇಟಲಿ ಪರ ಕ್ರಿಶನ್ ಮೂರು ವಿಕೆಟ್ ಪಡೆದರೆ, ಬೆನ್ ಮಾನೆಟ್ಟಿ ಎರಡು ವಿಕೆಟ್ ಪಡೆದರು. ಅಲಿ ಹಸನ್, ಜೆಜೆ ಸ್ಮಟ್ಸ್ ಮತ್ತು ಜಸ್ಪ್ರೀತ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಇಟಲಿ ಪರ ಸಹೋದರರಾದ ಜಸ್ಟಿನ್ ಮೊಸ್ಕಾ ಮತ್ತು ಆಂಥೋನಿ ಮೊಸ್ಕಾ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಜಸ್ಟಿನ್ ಅಜೇಯ 60 ರನ್ ಗಳಿಸಿದರೆ, ಆಂಥೋನಿ ಕೂಡ ಅಜೇಯ 62 ರನ್ ಸಿಡಿಸಿದರು. ಈ ಇಬ್ಬರಿಗೆ ಟಿ20 ವಿಶ್ವಕಪ್‌ನಲ್ಲಿ ಇದು ಚೊಚ್ಚಲ ಅರ್ಧಶತಕವಾಗಿತ್ತು. ಇವರಿಬ್ಬರು ಒಟ್ಟಿಗೆ ಒಂಬತ್ತು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
ಇಟಲಿ ಆಡಿರುವ ಎರಡು ಪಂದ್ಯಗಳಿಂದ ಎರಡು ಅಂಕಗಳೊಂದಿಗೆ ಗ್ರೂಪ್ ಸಿ ನಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಇಟಲಿ ಸೂಪರ್ ಏಟ್ಸ್ ಹಂತವನ್ನು ತಲುಪುವ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ನೇಪಾಳವು ಸತತ ಎರಡನೇ ಸೋಲನ್ನು ಎದುರಿಸಿ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.

ನೋಡಿರಿ

