ಬೆಳ್ತಂಗಡಿಯ ವಿದ್ಯಾರ್ಥಿನಿ ಕಿಡ್ನ್ಯಾಪ್ ಯತ್ನ ಕೇಸ್‌ಗೆ ಬಿಗ್ ಟ್ವಿಸ್ಟ್! – ಇದೊಂದು ಕಾರಣಕ್ಕೆ ಇಷ್ಟೊಂದು ಡ್ರಾಮಾ ಬೇಕಿತ್ತಾ?

ಬೆಳ್ತಂಗಡಿಯಲ್ಲಿ ನಡೆದ ಕಿಡ್ನ್ಯಾಪ್ ಯತ್ನ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆ ವೇಳೆ ವಿದ್ಯಾರ್ಥಿನಿ ಸಿನಿಮೀಯ ಮಾದರಿ ಕತೆ ಕಟ್ಟಿರೋದು ಬಯಲಾಗಿದೆ.
ಇದನ್ನೂ ಓದಿ: ವಿಧಾನಸೌಧದಲ್ಲಿ 300 ಗ್ರಾಂ ಚಿನ್ನಾಭರಣ , 1.5 ಲಕ್ಷ ರೂ. ಕಳ್ಳತನ! – ಸಚಿವರ ಕಚೇರಿಯಲ್ಲಿ ಇಷ್ಟೊಂದು ಚಿನ್ನ ಸಿಕ್ಕಿದ್ದು ಹೇಗೆ?
ಅಷ್ಟಕ್ಕೂ ಆಗಿದ್ದೇನು?
ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು, ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ತನ್ನನ್ನು ಅಪಹರಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಳು. ಕಾರಿನಲ್ಲಿ ಬಂದ ಮೂವರು ಮಾಸ್ಕ್ಧಾರಿಗಳು ಚೂರಿ ತೋರಿಸಿ ಬಲವಂತವಾಗಿ ಎಳೆದು ಕಾರಲ್ಲಿ ಕೂರಿಸಲು ಯತ್ನಿಸಿದ್ದಾರೆ. ಈ ವೇಳೆ ತನ್ನ ಕೈಗೆ ಗಾಯವಾಗಿದೆ ಎಂದು ಹೇಳಿದ್ದಳು. ಈ ವಿಚಾರ ಕುಟುಂಬಸ್ಥರ ಜೊತೆಗೆ ಸ್ಥಳೀಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದರು. ಇದೀಗ ಪೊಲೀಸರ ಮುಂದೆ ಬಾಲಕಿ ಡ್ರಾಮಾ ಬಯಲಾಗಿದೆ. ತಾನೇ ಕಿಡ್ನ್ಯಾಪ್ ಕತೆ ಕಟ್ಟಿ ಎಲ್ಲರನ್ನ ನಂಬಿಸಿದ್ದಳು ಅನ್ನೋದು ಗೊತ್ತಾಗಿದೆ.
ಬಾಲಕಿ ಡ್ರಾಮಾ ಮಾಡಿದ್ದು ಯಾಕೆ?
ಬಾಲಕಿಗೆ ಊರಿನಲ್ಲಿ ಕಾಲೇಜಿಗೆ ತೆರಳಲು ಇಷ್ಟ ಇರಲಿಲ್ಲ. ಮಂಗಳೂರಿನಲ್ಲಿ ಕಾಲೇಜಿಗೆ ಹೋಗಬೇಕು ಎಂದು ಅಂದಕೊಂಡಿದ್ದಳು. ಆದ್ರೆ ಬಾಲಕಿ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಆಕೆ ಕಿಡ್ನ್ಯಾಪ್ ಕತೆ ಕಟ್ಟಿದ್ಲು. ಕಿಡ್ನ್ಯಾಪ್ ಡ್ರಾಮಾ ಮಾಡಿದ್ರೆ ತನ್ನನ್ನು ಮನೆಯವರು ಮಂಗಳೂರಿನ ಕಾಲೇಜಿಗೆ ಸೇರಿಸುತ್ತಾರೆ ಅಂತ ಪ್ಲ್ಯಾನ್ ಮಾಡಿದ್ಲು. ಅದಕ್ಕೆ ತಕ್ಕಂತೆ ಭರ್ಜರಿ ಪ್ಲ್ಯಾನ್ ಕೂಡ ಮಾಡಿದ್ದಳು. ಬ್ಲೇಡ್‌ನಿಂದ ತಾನೇ ಕೈ ಕೊಯ್ದುಕೊಂಡು ಕತೆ ಹೇಳಿದ್ದಳು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಯತ್ನ ಪ್ರಕರಣ ಸಂಬಂಧ ಪೊಲೀಸರು ಇಡೀ ದಿನ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯ ಶಾಸಕ ಹರೀಶ್ ಪೂಂಜಾ ಕೂಡ ದೌಡಾಯಿಸಿ ಬಾಲಕಿಯನ್ನು ಭೇಟಿ ಮಾಡಿದ್ದರು. ಆದ್ರೆ ತನಿಖೆ ವೇಳೆ ವಿದ್ಯಾರ್ಥಿನಿಯೇ ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದಾಳೆ.
ಬ್ಯಾಗ್ನಲ್ಲಿರುವ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿದ್ದ ಈಕೆ, ಬಳಿಕ ಬ್ಯಾಗ್ನ ದಾರಿಯಲ್ಲೇ ಬಿಸಾಕಿದ್ದಳು. ಸ್ಕೂಟಿಯನ್ನು ನಿಲ್ಲಿಸಿ ಬ್ಲೇಡ್‌ನಿಂದ ಕೈ ಕುಯ್ದುಕೊಂಡು ನಾಟಕ ಮಾಡಿದ್ದಳು. ಮತ್ತೊಂದೆಡೆ ವಿದ್ಯಾರ್ಥಿನಿ ಸ್ಕೂಟಿಯಿಂದ ಬಿದ್ದಿರುವಂತೆ ನಟಿಸುವ ವೇಳೆ ಹಿಂಬದಿಯಿಂದ ಬಂದಿದ್ದ ಅಬ್ಬುಸಾಲಿ ಎಂಬಾತ ಕೂಡ ಘಟನೆಯ ಬಗ್ಗೆ ವಿವರಿಸಿದ್ದ ಕಾರಣ ಆರಂಭದಲ್ಲಿ ಈಕೆ ಹೇಳುತ್ತಿರುವುದು ಸುಳ್ಳು ಕತೆಯಾಗಿರಬಹುದೆಂಬ ಅನುಮಾನ ಯಾರಿಗೂ ಬಂದಿರಲಿಲ್ಲ. ವಿದ್ಯಾರ್ಥಿನಿ ಹೇಳಿದ್ದನ್ನ ಮೊದಲು ಅಬ್ಬುಸಾಲಿ ನಂಬಿದ್ದರೆ ಬಳಿಕ ಎಲ್ಲರೂ ಆಕೆ ಹೇಳ್ತಿರೋದು ಸತ್ಯ ಎಂದು ನಂಬಿ ಕುಟುಂಬಸ್ಥರೂ ಕಂಗಾಲಾಗಿದ್ದರು. ಆದರೆ ಪೊಲೀಸರ ತನಿಖೆಯಿಂದ ಕೊನೆಗೂ ವಿದ್ಯಾರ್ಥಿನಿ ನಾಟಕ ಬಯಲಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ನೋಡಿರಿ

