ಭಾರತ ಜೊತೆ ಆಡಲು ಪಾಕ್ ರೆಡಿ – ಇಂದು ಅಥವಾ ನಾಳೆ ಅಧಿಕೃತ ಘೋಷಣೆ

ಪಾಕ್ ಯೂಟರ್ನ್ ಹೊಡೆದಿದೆ. ಫೆ.15ರಂದು ಭಾರತದ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಣಕ್ಕಿಳಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಅಂತಿಮ ನಿರ್ಧಾರವನ್ನು ಇಂದು ಅಥವಾ ನಾಳೆ ಪ್ರಕಟಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಖ್ವಿ, ‘ನಾವು ಐಸಿಸಿ ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿ ಜೊತೆ ಚರ್ಚೆ ನಡೆಸಿದ್ದೇವೆ. ಅದರ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಸರಿಯಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ಬಳಿಕ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಐಸಿಸಿ ಪ್ರತಿಕ್ರಿಯೆ ಬಂದ ಬಳಿಕ ಅದರ ಬಗ್ಗೆ ನಮ್ಮ ಪ್ರಧಾನಿ ಜತೆ ಚರ್ಚೆ ನಡೆಸುತ್ತೇವೆ. ಅಂತಿಮ ನಿರ್ಧಾರವನ್ನು ನಾಳೆ ಅಥವಾ ನಾಡಿದ್ದು ಪ್ರಕಟಿಸುತ್ತೇವೆ’ ಎಂದಿದ್ದಾರೆ.ಪಿಸಿಬಿ ಮೇಲೆ ಐಸಿಸಿ ಕಠಿಣ ಕ್ರಮಕೈಗೊಳ್ಳುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಖ್ವಿ, ‘ಈ ಬೆದರಿಕೆಗಳಿಗೆ ನಾವು ಹೆದರಲ್ಲ ಎಂಬುದು ನಿಮಗೆ ಗೊತ್ತು. ನಮ್ಮ ಫೀಲ್ಡ್ ಮಾರ್ಷಲ್ (ಅಸೀಂ ಮುನೀರ್) ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ಯಾವುದೇ ನಿರ್ಬಂಧಗಳ ಬಗ್ಗೆ ನಮಗೆ ಚಿಂತೆ ಇಲ್ಲ’ ಎಂದರು.
ಇದನ್ನೂ ಓದಿ: ಮುಂಬೈಗೆ ಮಣ್ಣು ಮುಕ್ಕಿಸಿದ KL – ಕರ್ನಾಟಕಕ್ಕೆ ಸ್ಮರಣೀಯ ಗೆಲುವು
ಆಟದ ಹಿತದೃಷ್ಟಿಯಿಂದ ಬಹಿಷ್ಕಾರ ನಿರ್ಧಾರ ದಿಂದ ಹಿಂದೆ ಸರಿಯುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮುಖ್ಯಸ್ಥ ಅಮಿನುಲ್ ಇಸ್ಲಾಂ ಅವರು ಪಾಕಿಸ್ತಾನಕ್ಕೆ ಮನವಿ ಮಾಡಿದ್ದರು. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರೂ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಅವರಿಗೆ ಕರೆ ಮಾಡಿ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಪಾಕ್ ಸರ್ಕಾರದ ನಿರ್ಧಾರ ಕೈಗೊಂಡಿದೆ.ಭದ್ರತೆಯ ಆತಂಕದ ಕಾರಣಗಳನ್ನು ಒಡ್ಡಿ ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ ನಂತರ ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಹೊರಗಿಡಲಾಗಿದೆ.
ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮೇಲೆ ಯಾವುದೇ ನಿರ್ಬಂಧ ಅಥವಾ ದಂಡ ವಿಧಿಸುವುದಿಲ್ಲ ಎಂದು ಐಸಿಸಿ ತಿಳಿಸಿದೆ. ಬಿಸಿಬಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜೊತೆ ಮಾತುಕತೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಬಿಗೆ ಯಾವುದೇ ಆರ್ಥಿಕ, ಕ್ರೀಡಾ ಅಥವಾ ಆಡಳಿತಾತ್ಮಕ ನಿರ್ಬಂಧ ವಿಧಿಸುವುದಿಲ್ಲ. ಮಾತುಕತೆಯ ಭಾಗವಾಗಿ 2028 ಮತ್ತು 2031ರ ನಡುವೆ ಐಸಿಸಿ ಟೂರ್ನಿಯೊಂದಕ್ಕೆ ಬಾಂಗ್ಲಾದೇಶ ಆತಿಥ್ಯವನ್ನೂ ವಹಿಸಲಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ನೋಡಿರಿ

