ಇದು ಹಾಲಲ್ಲ.. ಹಾಲಾಹಲ! – ಯೂರಿಯಾ, ಡಿಟರ್ಜೆಂಟ್ ಪೌಡರ್‌ನಿಂದ ತಯಾರಾಗುತ್ತೆ ಹಾಲು, ಮೊಸರು!

ಇದು ಹಾಲಲ್ಲ.. ಹಾಲಾಹಲ! – ಯೂರಿಯಾ, ಡಿಟರ್ಜೆಂಟ್ ಪೌಡರ್‌ನಿಂದ ತಯಾರಾಗುತ್ತೆ ಹಾಲು, ಮೊಸರು!

ಮಾರ್ಕೆಟ್‌ನಲ್ಲಿ ಸಿಗುವ ವಸ್ತುಗಳಲ್ಲಿ ನಕಲಿ ಯಾವುದು? ಅಸಲಿ ಯಾವುದು ಎಂದು ಪತ್ತೆಹಚ್ಚುವುದೇ ದೊಡ್ಡ ತಲೆನೋವು. ಇತ್ತೀಚೆಗೆ ನಾವು ಬಳಸೋ ವಸ್ತುಗಳು ಮಾತ್ರವಲ್ಲ, ತಿನ್ನೋ ಆಹಾರ ಕೂಡ ನಕಲಿಯಾಗಿರುತ್ತವೆ. ಇದೀಗ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ರಾಸಾಯನಿಕ ಬಳಸಿ ನಕಲಿ ಮಜ್ಜಿಗೆ, ಹಾಲು ತಯಾರಿಸುತ್ತಿದ್ದ ಫ್ಯಾಕ್ಟರಿಯೊಂದು ಪತ್ತೆಯಾಗಿದೆ.

ಇದನ್ನೂ ಓದಿ: ಮುಖಕ್ಕೆ ಸ್ಪ್ರೇ ಹೊಡೆದು ಮಾಂಗಲ್ಯಸರ ಕದ್ದೊಯ್ದ ಕಳ್ಳರು! – ಮಹಿಳೆ ಸಾವು!

ಇತ್ತೀಚೆಗೆ ಹಣದಾಸೆಗೆ ಜನರು ಏನು ಬೇಕಾದ್ರೂ ಮಾಡಲು ರೆಡಿ ಇರುತ್ತಾರೆ. ಶುದ್ದ ಹಾಲಿಗೆ ನೀರು ಬೆರೆಸಿರುವ ಬಗ್ಗೆ ಕೇಳಿದ್ದೆವು. ಇದೀಗ ಇಲ್ಲೊಂದು ಕಡೆ, ಕೆಮಿಕಲ್ ಬಳಸಿ ಕೃತಕವಾಗಿ ಹಾಲು ತಯಾರಿಸಿ ಜನರ ಜೀವದ ಜೊತೆ ಆಟ ಆಡುತ್ತಿರುವುದು ಬಯಲಾಗಿದೆ. ಗುಜರಾತಿನಲ್ಲಿ ರಾಸಾಯನಿಕ ಬಳಸಿ ನಕಲಿ ಮಜ್ಜಿಗೆ, ಹಾಲು ತಯಾರಿಸುತ್ತಿದ್ದ ಫ್ಯಾಕ್ಟರಿಯೊಂದು ಪತ್ತೆಯಾಗಿದೆ.

ಗುಜರಾತ್‌ನ ಸಬರ್ಕಾಂತದಲ್ಲಿ ಡಿಟರ್ಜೆಂಟ್, ಯೂರಿಯಾ ಮತ್ತು ಇತರ ರಾಸಾಯನಿಕಗಳನ್ನು ಬಳಸಿ ನಕಲಿ ಹಾಲು ಮತ್ತು ಮಜ್ಜಿಗೆ ತಯಾರಿಸುತ್ತಿದ್ದ ಕಾರ್ಖಾನೆಯನ್ನು ಪತ್ತೆಹಚ್ಚಲಾಗಿದೆ. ಈ ಕಾರ್ಖಾನೆ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಅಧಿಕಾರಿಗಳು 7.1 ಲಕ್ಷ ಮೌಲ್ಯದ ಸರಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ. ಶ್ರೀ ಸತ್ಯ ಡೈರಿ ಪ್ರಾಡಕ್ಟ್ಸ್ ಎಂಬ ಘಟಕದಲ್ಲಿ ದಾಳಿ ನಡೆಸಲಾಗಿದ್ದು, ಅಲ್ಲಿ ನೀರು, ಹಾಲಿನ ಪುಡಿ, ಕಾಸ್ಟಿಕ್ ಸೋಡಾ, ಸಂಸ್ಕರಿಸಿದ ಪಾಮ್ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ, ಡಿಟರ್ಜೆಂಟ್ ಪೌಡರ್ ಮತ್ತು ಯೂರಿಯಾ ಗೊಬ್ಬರವನ್ನು ಬೆರೆಸಿ ಹಾಲು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಆರೋಪಿಗಳು ಪ್ರತಿದಿನ 1,700 ರಿಂದ 1,800 ಲೀಟರ್ ಹಾಲು ಉತ್ಪಾದಿಸಲು 300 ಲೀಟರ್ ನಿಜವಾದ ಹಾಲನ್ನು ವಿವಿಧ ರಾಸಾಯನಿಕಗಳೊಂದಿಗೆ ಬೆರೆಸುತ್ತಿದ್ದರು. ನಂತರ ಈ ಹಾಲನ್ನು ಪ್ಯಾಕ್ ಮಾಡಿ ಹಳ್ಳಿಗಳಿಗೆ ಸರಬರಾಜು ಮಾಡುತ್ತಿದ್ದರು. ಪೊಲೀಸರು ವಶಪಡಿಸಿಕೊಂಡ ಕಲಬೆರಕೆ ವಸ್ತುಗಳಲ್ಲಿ 450 ಕೆಜಿ ಹಾಲೊಡಕು ಪುಡಿ, 625 ಕೆಜಿ ಕೆನೆ ತೆಗೆದ ಹಾಲಿನ ಪುಡಿ, 300 ಕೆಜಿ ಪ್ರೀಮಿಯಂ ಎಸ್ಎಂಪಿ ಪುಡಿ, ಯೂರಿಯಾ ಗೊಬ್ಬರ, ಕಾಸ್ಟಿಕ್ ಸೋಡಾ, ಡಿಟರ್ಜೆಂಟ್ ಪೌಡರ್, ಸೋಯಾಬೀನ್ ಎಣ್ಣೆ ಮತ್ತು ಪಾಮ್ ಎಣ್ಣೆ ಸೇರಿವೆ. ಮಾರಾಟಕ್ಕೆ ಸಿದ್ಧವಾಗಿದ್ದ 1,962 ಲೀಟರ್ ಕಲಬೆರಕೆ ಹಾಲು ಮತ್ತು 1,180 ಲೀಟರ್ ಕಲಬೆರಕೆ ಮಜ್ಜಿಗೆಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಹಾಲು ದಪ್ಪವಾಗಿದೆ, ಪ್ರೋಟೀನ್ ಅಂಶದಿಂದ ಕೂಡಿದೆ ಎಂಬುದನ್ನು ತೋರಿಸಲು ಈ ಎಲ್ಲ ಕಲಬೆರಿಕೆಯನ್ನು ಬಳಸಲಾಗುತ್ತಿತ್ತು. ನಿರ್ದಿಷ್ಟ ಮಾಹಿತಿಯ ಮೇರೆಗೆ, ಸ್ಥಳೀಯ ಅಪರಾಧ ವಿಭಾಗ, ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ, ಆಹಾರ ಮತ್ತು ಔಷಧ ಇಲಾಖೆಯ ಜಂಟಿ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಅಧಿಕಾರಿಗಳು ಹಾಲಿನ ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಬಳಸುವ ಅಪಾಯಕಾರಿ ರಾಸಾಯನಿಕಗಳು, ಕಲಬೆರಕೆ ವಸ್ತುಗಳು ಮತ್ತು ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

Shwetha M