ಟಿಪ್ಸ್ ಕೊಟ್ರೆ ಡ್ಯಾನ್ಸ್ ಮಾಡ್ತೀವಿ! – ಬೆಂಗಳೂರಿನ ಈ ಕೆಫೆ ಸಿಬ್ಬಂದಿ ಮಸ್ತ್ ಡ್ಯಾನ್ಸ್!

ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಸಿಬ್ಬಂದಿಗಳಿಗೆ ಟಿಪ್ಸ್ ನೀಡುತ್ತೇವೆ. ಟಿಪ್ಸ್ ತೆಗೆದುಕೊಂಡ ಸಿಬ್ಬಂದಿಗಳು ಖುಷಿಯಿಂದ ಥ್ಯಾಂಕ್ಸ್ ಹೇಳ್ತಾರೆ. ಆದ್ರೆ ಇಲ್ಲೊಂದು ಕಡೆ, ಟಿಪ್ಸ್ ಕೊಟ್ರೆ ಅಲ್ಲಿನ ಸಿಬ್ಬಂದಿ ಡ್ಯಾನ್ಸ್ ಮಾಡ್ತಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಕೇಂದ್ರ ಸಚಿವರನ್ನು ಭೇಟಿಯಾದ ತೇಜಸ್ವಿ ಸೂರ್ಯ! – ಮೆಟ್ರೋ ದರ ಮತ್ತೆ ಪರಿಷ್ಕರಣೆಯಾಗುತ್ತಾ?
ಬೆಂಗಳೂರಿನ ಈ ಕೆಫೆ ಮಾತ್ರ ಈಗ ಟಿಪ್ಸ್ ವಿಚಾರವಾಗಿ ಗಮನ ಸೆಳೆದಿದೆ. ಗ್ರಾಹಕರು ಟಿಪ್ ನೀಡಿದಾಗಲೆಲ್ಲಾ ಸಿಬ್ಬಂದಿ ಡ್ಯಾನ್ಸ್ ಮಾಡುವ ಮೂಲಕ ಗ್ರಾಹಕರನ್ನು ಖುಷಿಪಡಿಸಿದ್ದಾರೆ. ಇದ್ರ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯಲ್ಲಿರುವ ಕೆಫೆ ನುವಿಯೊದಲ್ಲಿ, ಕೌಂಟರ್ ಬಳಿ ಇರಿಸಲಾದ ಸಣ್ಣ ಫಲಕವು ಗ್ರಾಹಕರ ಗಮನ ಸೆಳೆದಿದೆ. ಇಲ್ಲಿ ನೀವು ಟಿಪ್ಸ್ ಬಾಕ್ಸ್‌ಗೆ ಹಣ ಹಾಕಿದರೆ ಸಾಕು, ಅಲ್ಲಿನ ಸಿಬ್ಬಂದಿ ನಿಮಗಾಗಿ ಕುಣಿದು ಖುಷಿ ಪಡಿಸುತ್ತಾರೆ. ಕೆಫೆಯ ಕೌಂಟರ್ ಮೇಲೆ ಒಂದು ಸಣ್ಣ ಫಲಕವನ್ನು ಹಾಕಲಾಗಿದ್ದು, ಅದರಲ್ಲಿ “ನೀವು ಟಿಪ್ಸ್ ಕೊಟ್ಟರೆ , ಸಿಬ್ಬಂದಿ ನಿಮಗಾಗಿ ನೃತ್ಯ ಮಾಡುತ್ತಾರೆ” ಎಂದು ಬರೆಯಲಾಗಿದೆ.
ಈ ವಿಡಿಯೊವನ್ನು ಕೆಫೆಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆದ ವಿಡಿಯೋದಲ್ಲಿ, ಗ್ರಾಹಕರೊಬ್ಬರು ಟಿಪ್ಸ್ ನೀಡಿದ ಕೂಡಲೇ ಸಿಬ್ಬಂದಿಗಳು ಪರಸ್ಪರ ಕಣ್ಣ ಸನ್ನೆ ಮೂಲಕ ಕೌಂಟರ್ ಹತ್ತಿರವೇ ನೃತ್ಯ ಮಾಡುವುದನ್ನು ಕಾಣಬಹುದು. ಇದನ್ನು ಕಂಡು ಅಲ್ಲಿದ್ದ ಜನರು ಸಂಭ್ರಮಿಸಿದ್ದಾರೆ. ಸದ್ಯ ಈ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಬಳಕೆದಾರರೊಬ್ಬರು ಇದು ಕೆಲಸದ ನಡುವೆ ಸಂತೋಷವನ್ನು ಹೆಚ್ಚಿಸುವ ಕೆಲಸ ಎಂದಿದ್ದಾರೆ. ಮತ್ತೊಬ್ಬರು ಈ ಕೆಫೆಯಲ್ಲಿ ಒಂದು ಸುಂದರ ಅನುಭವ ಎಂದು ಬರೆದುಕೊಂಡಿದ್ದಾರೆ.

ನೋಡಿರಿ

